ಉ.ಕ.ದಲ್ಲಿ ಬರದ ಛಾಯೆ

ಆಲಮಟ್ಟಿ: ಉತ್ತರ ಕರ್ನಾಟಕ ಭಾಗದ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇಲ್ಲಿ ಬರದ ಛಾಯೆ ಆವರಿಸಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಜಲಸಂಪನ್ಮೂಲ ಇಲಾಖೆ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ಹೇಳಿದರು.

ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಬರ ಅಧ್ಯಯನ ನಡೆಸುತ್ತಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ ನೀರಿನ ಕೊರತೆಯ ಕಾರಣ ತೋಟಗಾರಿಕೆ ಬೆಳೆಗಳ ಜತೆಗೆ ಕೃಷಿ ಬೆಳೆಗಳಿಗೂ ಸಾಕಷ್ಟು ಹಾನಿಯಾಗಿದೆ. ದ್ರಾಕ್ಷಿ, ದಾಳಿಂಬೆ, ಜೋಳ ಬೆಳೆಗಳೂ ಒಣಗುತ್ತಿವೆ. ಅಂತರ್ಜಲ ಮಟ್ಟವೂ ಕುಸಿದಿದ್ದು ಅನೇಕ ಕಡೆ ಬೆಳೆಗಳ ರಕ್ಷಣೆಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಸ್ಥಿತಿ ಬಂದಿದೆ. ಒಟ್ಟಾರೆ ಈ ಭಾಗ ಬರದಿಂದ ಆವೃತವಾಗಿದೆ. ಜಿಲ್ಲಾಡಳಿತದಿಂದ ಅಂಕಿ ಅಂಶಗಳನ್ನು ಪಡೆದಿದ್ದು ಇನ್ನಷ್ಟು ಮಾಹಿತಿ ಬಂದರೆ 10 ದಿನದಲ್ಲಿ ಕೇಂದ್ರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗುವುದು ಎಂದು ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಂತರ ಆಲಮಟ್ಟಿ ಜಲಾಶಯಕ್ಕೆ ತೆರಳಿ ಜಲಾಶಯದಲ್ಲಿನ ನೀರಿನ ಸಂಗ್ರಹದ ಮಾಹಿತಿ ಪಡೆದರು. ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಶರಣಪ್ಪ ಚಲವಾದಿ, ಎಚ್.ಸಿ. ನರೇಂದ್ರ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಕೇಂದ್ರ ಬರ ಅಧ್ಯಯನ ತಂಡದ ಡಾ. ತರುಣಕುಮಾರ ಸಿಂಗ್, ಸತ್ಯಕುಮಾರ, ವಿಜಯಪುರ ಎಸಿ ರುದ್ರೇಶ, ನಿಡಗುಂದಿ ತಹಸೀಲ್ದಾರ್ ಇಸ್ಮಾಯಿಲ್ ಮುಲ್ಕಿಸಿಪಾಯಿ, ಎಸ್.ಎಂ. ಮೋಮಿನ, ನಾನಾಗೌಡ ಪಾಟೀಲ, ವಿನೋದ ಯಲಗಣ್ಣವರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.