ರಾಜ್ಯಮಟ್ಟದ ಶಿಕ್ಷಣ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಆಲಮಟ್ಟಿ: ಗ್ರಾಮದಲ್ಲಿ ಎರಡು ದಿನಗಳವರೆಗೆ ನಡೆದ ರಾಜ್ಯಮಟ್ಟದ ಆರನೇ ಶಿಕ್ಷಣ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿತು. ಗೋಷ್ಠಿಗಳ ಸರ್ವಾಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಎನ್.ಬಿ. ಕೊಂಗವಾಡ, ಐದು ಗೋಷ್ಠಿಗಳ ವಿಶ್ಲೇಷಣೆ ನಡೆಸಿದರು. ಗೋಷ್ಠಿಗಳಲ್ಲಿ ಮೂಡಿ ಬಂದ ವಿಚಾರಗಳ ಬಗ್ಗೆ ಪುಸ್ತಕ ಪ್ರಕಟಿಸುವುದಾಗಿ ಘೊಷಿಸಿದರು.

ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಮಾತನಾಡಿ, ವಿಷನ್ 2020ಕ್ಕೆ ಆಶಯವಾಗಿ ಶಿಕ್ಷಕರು ಕಾರ್ಯನಿರ್ವಹಿಸುವುದು ಅಗತ್ಯವಿದೆ ಎಂದರು.

ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಹಾಗೂ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ವಿವಿಧ ಶಿಕ್ಷಕರು, ಅಧಿಕಾರಿಗಳು ಹಾಗೂ ಎಸ್​ಎಸ್​ಎಲ್​ಸಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಹನಿರ್ದೇಶಕ ಕೆ.ಎಸ್. ಕರಿಚಣ್ಣವರ, ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಡಿಡಿಪಿಐ ಎಂ.ಎನ್. ಸಿಂಧೂರ, ಬಿಇಒ ಎಂ.ಎ. ಗುಳೇದಗುಡ್ಡ, ಡಾ. ಅಶೋಕ ಲಿಮಕರ, ಶಿಕ್ಷಕ ಸಂಘಟನೆಯ ಚಂದ್ರಶೇಖರ ನುಗ್ಲಿ, ಸುರೇಶ ಶೇಡಶ್ಯಾಳ, ಬಿ.ಟಿ. ಗೌಡರ, ಅರ್ಜುನ ಲಮಾಣಿ, ಜುಬೆರ್ ಕೆರೂರ ಮತ್ತಿತರರಿದ್ದರು.

ಸಂಗಮೇಶ ಪೂಜಾರಿ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ಎಚ್.ಎಚ್. ದೊಡಮನಿ ವಂದಿಸಿದರು.

ಅಗಸ್ತ್ಯ ಫೌಂಡೇಷನ್​ದ ಸಂಚಾರಿ ವಿಜ್ಞಾನ ಪ್ರಯೋಗಾಲಯವು ಸಮ್ಮೇಳನದ ಎರಡನೇ ದಿನ ಹಲವಾರು ವಿದ್ಯಾರ್ಥಿಗಳ, ಶಿಕ್ಷಕರನ್ನು ಆಕರ್ಷಿಸಿತು. ಪ್ರಾಥಮಿಕದಿಂದ ಪ್ರೌಢಶಾಲೆ ಪಠ್ಯಕ್ಕೆ ಅನುಗುಣವಾದ ಹಲವಾರು ಪ್ರಯೋಗಗಳು, ದೂರದರ್ಶಕದಿಂದ ಆಕಾಶಕಾಯ ವೀಕ್ಷಣೆ ಸೇರಿದಂತೆ ಹಲವಾರು ಪ್ರಯೋಗಗಳು ಮಕ್ಕಳನ್ನು ಖುಷಿ ಪಡಿಸಿದವು. ಬೇನಾಳದ ಗಾಂಧಿ ಫಿಲಾಸಫಿಕಲ್ ಫೋರಂ ವತಿಯಿಂದ ಏರ್ಪಡಿಸಿದ್ದ ಗಾಂಧೀಜಿಯವರ ವಿವಿಧ ಬದುಕುಗಳುಳ್ಳ ಗೋಡೆ ಚಿತ್ರಗಳು ಗಮನ ಸೆಳೆದವು. ಸುಮಾರು 100ಕ್ಕೂ ಹೆಚ್ಚು ಗಾಂಧೀಜಿಯವರ ಬದುಕು, ಬರಹ, ವಿಚಾರಗಳನ್ನು ಕಟೌಟ್​ವುಳ್ಳ ಫೋಟೋ ಫ್ಲೆಕ್ಸ್ ಮೂಲಕ ಇಟ್ಟಿದ್ದ ಅದರ ರೂವಾರಿ, ಫೋರಂನ ನೀಲೇಶ ಬೇನಾಳ ಶ್ರಮವನ್ನು ಹಲವಾರು ಜನ ಕೊಂಡಾಡಿದರು.