ಆಲಮಟ್ಟಿ ಜಲಾಶಯಕ್ಕೆ ಭದ್ರತೆ

ಆಲಮಟ್ಟಿ: ಪಾಕಿಸ್ತಾನದ ಮೇಲಿನ ವಾಯು ದಾಳಿ ನಂತರ ಸೂಕ್ಷ್ಮಪ್ರದೇಶವಾದ ಆಲಮಟ್ಟಿ ಜಲಾಶಯಕ್ಕೆ ಶನಿವಾರದಿಂದ ಹೆಚ್ಚಿನ ಭದ್ರತೆ ನೀಡಲಾಗಿದೆ. ಜಲಾಶಯದ ಭಾಗವನ್ನು ಹೈ ಅಲರ್ಟ್ ಕ್ಷೇತ್ರ ಎಂದು ಘೋಷಿಸಲಾಗಿದೆ.

ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಸೋಮವಾರ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಭದ್ರತೆಯ ವಿವಿಧ ಪಾಯಿಂಟ್‌ಗಳನ್ನು ಪರಿಶೀಲಿಸಿದರು. ಕೆಎಸ್‌ಐಎಸ್‌ಎ್ ಪೊಲೀಸರಿಗೆ ವಿವಿಧ ಸೂಚನೆಗಳನ್ನು ನೀಡಿದರು. ಡಿವೈಎಸ್‌ಪಿ ಮಹೇಶ್ವರಗೌಡ ಹಾಗೂ ಸ್ಥಳೀಯ ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು.

ಹೆಚ್ಚಿದ ಭದ್ರತೆ: ಜಲಾಶಯದ ಭದ್ರತೆಗಾಗಿ ಕೆಎಸ್‌ಐಎಸ್‌ಎ್ನ 5 ಪಿಎಸ್‌ಐ ಹಾಗೂ 91 ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಶಸ್ತ್ರ ಸಜ್ಜಿತವಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ಆಲಮಟ್ಟಿ ವಿಭಾಗದ ಮುಖ್ಯಸ್ಥ ಈರಪ್ಪ ವಾಲಿ ಸುದ್ದಿಗಾರರಿಗೆ ತಿಳಿಸಿದರು.

ಆಲಮಟ್ಟಿ ಜಲಾಶಯ, ಉದ್ಯಾನಕ್ಕೆ ಬರುವ ಆಲಮಟ್ಟಿ ಪೆಟ್ರೋಲ್ ಪಂಪ್ ಮಾರ್ಗದಲ್ಲಿನ ಎಲ್ಲ ಖಾಸಗಿ ವಾಹನಗಳನ್ನು ಕಳೆದ ಎರಡು ದಿನದಿಂದ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರಿಂದ ಪ್ರವಾಸಿಗರು ಪೆಟ್ರೋಲ್ ಪಂಪ್ ಹತ್ತಿರದ ಪಾರ್ಕಿಂಗ್ ಬಳಿ ವಾಹನ ಪಾರ್ಕಿಂಗ್ ಮಾಡಿ ಅಲ್ಲಿಂದಲೇ ಅಂದಾಜು ಅರ್ಧ ಕಿ.ಮೀ. ನಡೆದುಕೊಂಡು ಮೊಘಲ್, ಸಂಗೀತ ಕಾರಂಜಿ ವೀಕ್ಷಣೆಗೆ ತೆರಳಬೇಕಾಗಿದೆ.