ಕಾಲುವೆ ನೀರು ಬಿಡಲು ಆಗ್ರಹ

ಆಲಮಟ್ಟಿ: ಲಾಲಬಹಾದ್ದೂರ್ ಶಾಸ್ತ್ರೀ ಜಲಾಶಯದ ಆಲಮಟ್ಟಿ ಬಲದಂಡೆ ಕಾಲುವೆಗೆ ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಒತ್ತಾಯಿಸಿ ನಾಗರಿಕರು ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರರಿಗೆ ಬುಧವಾರ ಮನವಿ ಅರ್ಪಿಸಿದರು.

ನಂತರ ಮಾತನಾಡಿದ ನಾಗರಿಕರು, ಈಗ ಬೇಸಿಗೆಯಾದ್ದರಿಂದ ಬಿರುಬಿಸಿಲಿನಿಂದ ಕೊಳವೆಬಾವಿ, ತೆರೆದ ಬಾವಿಗಳೂ ಸೇರಿ ಎಲ್ಲ ಹಳ್ಳಗಳೂ ಒಣಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಆದ್ದರಿಂದ ಜೀವಜಲನೀಡಿ ಅವುಗಳನ್ನು ರಕ್ಷಣೆ ಮಾಡಬೇಕೆಂದು ವಿನಂತಿಸಿದರು.

ಕಾಲುವೆಗೆ ನೀರು ಹರಿಸುವುದರಿಂದ ಪಕ್ಕದ ಹಳ್ಳಗಳು, ಕೆರೆಗಳು ಹಾಗೂ ಬಾವಿಗಳಿಗೆ ನೀರು ಬರುತ್ತದೆ. ಇದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಇಂದಿನಿಂದಲೇ ನೀರು ಹರಿಸಬೇಕೆಂದು ಒತ್ತಾಯಿಸಿದರು.

ನಂತರ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತ ಆರ್.ಪಿ. ಕುಲಕರ್ಣಿ ಅವರು ಕೂಡಲೇ ಸಹಾಯಕ ಅಭಿಯಂತರುಗಳನ್ನು ಸಂಪರ್ಕಿಸಿ ಕುಡಿಯುವ ನೀರಿಗಾಗಿ ಕಾಲುವೆಗೆ ಒಂದು ಪಂಪ್ ಮೂಲಕ ನೀರು ಹರಿಸಬೇಕೆಂದು ಆದೇಶಿಸಿದರು. ಈಗ ನೀರು ಬಿಡುತ್ತಿರುವುದು ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮಾತ್ರ. ಯಾವುದೇ ಕಾರಣಕ್ಕೂ ಕಬ್ಬಿನ ಬೆಳೆಗೆ ನೀರುಣಿಸಬಾರದೆಂದು ನಾಗರಿಕರಿಗೆ ಎಚ್ಚರಿಸಿದರು. ಇದಕ್ಕೆ ನಮ್ಮ ಜಮೀನಿನಲ್ಲಿ ಯಾವುದೇ ಬೆಳೆಗಳಿಲ್ಲ. ಇದ್ದ ಬೆಳೆಗಳು ನೀರಿಲ್ಲದೇ ಒಣಗಿ ಹೋಗಿವೆ. ಈಗ ನಾವು ಬದುಕಲು ನೀರು ಕೊಡಿ, ಬೆಳೆಗಳಿಗೆ ನೀರುಣಿಸಲು ಬೆಳೆಗಳೇ ಇಲ್ಲ ಎಂದು ನಾಗರಿಕರಿಗೆ ತಿಳಿಸಿದರು.

ನರೇಶ ಮೇಖಾ, ಶಿವಾನಂದ ಅಂಬಿಗೇರ, ಮಂಜು ಬೂದಿಹಾಳ, ವೆಂಕಟೇಶ ಕುಂಚಗನೂರ, ಬಾಳಪ್ಪ ಮಳಗಾವಿ, ರಮೇಶ ಅಂಬಿಗೇರ, ಸಂಗಪ್ಪ ಇದ್ದಲಗಿ, ಶಿವು ಲೋಕಾಪುರ, ಹನುಮಂತ ಬೇನಾಳ, ಮಾಂತೇಶ ಕಾಳಗಿ, ಕನಕಪ್ಪ ತಳವಾರ, ಸಂಗಪ್ಪ ಚಿನ್ನೂರ, ರಾಮನಗೌಡ ದೊಡಮನಿ, ಹುಲ್ಲಪ್ಪ ಮಳಗಾವಿ ಸೇರಿ ಆಲಮಟ್ಟಿ ಬಲದಂಡೆ ವ್ಯಾಪ್ತಿಯ ನಾಯನೇಗಲಿ, ಮಂಕಣಿ, ಸುತಗುಂಡಾರ, ಡೊಮನಾಳ, ಬೊಮ್ಮಣಗಿ, ಮ್ಯಾಗೇರಿ, ದೇವಲಾಪುರ, ಕಟಗೂರ, ತುರಡಗಿ, ಹಂಡರಗಲ್ಲ, ಕೂಡಲಸಂಗಮ ನಾಗರಿಕರಿದ್ದರು.

Leave a Reply

Your email address will not be published. Required fields are marked *