ಮ್ಯಾನ್ಯುವಲ್ ಟೆಂಡರ್ ಪದ್ಧತಿಗೆ ಆಗ್ರಹ

ಆಲಮಟ್ಟಿ: ಕ್ಲೋಜರ್ ಹಾಗೂ ಸ್ಪೇಷಲ್ ರಿಪೇರಿ ಕಾಮಗಾರಿಗಳಿಗಾಗಿ 2019-20ನೇ ಸಾಲಿನಲ್ಲಿ ಮ್ಯಾನ್ಯುವಲ್ ಟೆಂಡರ್ ಪದ್ಧತಿ ಮಾಡಬೇಕು. ಇಲ್ಲದಿದ್ದರೆ ಏ.29 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಕೃಷ್ಣಾತೀರ ಗುತ್ತಿಗೆದಾರರ ಸಂಘ ಪದಾಧಿಕಾರಿಗಳು ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಜಿ.ಸಿ. ಮುತ್ತಲದಿನ್ನಿ ಮಾತನಾಡಿ, ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ವಲಯ ವ್ಯಾಪ್ತಿಯ ಕಾಲುವೆಗಳಿಗೆ ಕ್ಲೋಜರ್ ಹಾಗೂ ಸ್ಪೇಷಲ್ ರಿಪೇರಿ ಕಾಮಗಾರಿಗಳಿಗಾಗಿ ಕರೆಯುವ ಟೆಂಡರ್‌ಗಳನ್ನು ಇ- ಪ್ರೊಕ್ಯೂರ್‌ಮೆಂಟ್ ಮಾಡದೆ ಮ್ಯಾನುವಲ್ ಪದ್ಧತಿಯಲ್ಲಿ ಮಾಡಬೇಕು. ಇದರಿಂದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವ ಜತೆಗೆ ಕಾಲಮಿತಿಯಲ್ಲಿ ಪೂರ್ಣಗೊಂಡು ಸ್ಥಳೀಯವಾಗಿ ನಿರುದ್ಯೋಗ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುತ್ತದೆ ಎಂದರು.

ಇಲ್ಲಿನ ಸಂತ್ರಸ್ತರಲ್ಲಿನ ಕೆಲವರಿಗಾದರೂ ಇದರಿಂದ ಉದ್ಯೋಗ ದೊರಕುತ್ತದೆ. ಈ ವಿಷಯದ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಈ ಕುರಿತು ತಾವೂ ಕೂಡ ಇಲ್ಲಿಯ ವಾಸ್ತವ ಸಂಗತಿ ಅರಿಯಬೇಕು. ಇಲ್ಲವಾದರೆ ಅನಿವಾರ್ಯವಾಗಿ ಸಂಘದ ಎಲ್ಲ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯ ಇಂಜಿನಿಯರ್ ಆರ್.ಪಿ. ಕುಲಕರ್ಣಿ ಮನವಿ ಸ್ವೀಕರಿಸಿ, ಈ ಕುರಿತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.

ಅಶೋಕ ಉಪ್ಪಾರ, ಟಿ.ಎಸ್. ಅಬ್ಜಲಪುರ, ಗಿರೀಶ ಮರೋಳ, ಜಕ್ಕಪ್ಪ ಮಾಗಿ, ಅಂದಾನಯ್ಯ ಮುಷ್ಠಿಗೇರಿ, ರಮೇಶ ಪಟ್ಟಣಶೆಟ್ಟಿ, ಎಂ.ಎಸ್. ಜಲಪುರ, ಬಿ.ವಿ. ಮೈಲೇಶ್ವರ, ಎಂ.ಎಸ್. ಮಕಾನದಾರ, ಹನುಮಂತ ಪೂಜಾರಿ, ಮಾಂತೇಶ ಬೆಳಗಲ್ಲ, ಜಿ.ಬಿ. ಬಿರಾದಾರ ಇತರರು ಇದ್ದರು.

Leave a Reply

Your email address will not be published. Required fields are marked *