ತಿಂಗಳಿಗೆ 500 ರೂ. ಸಹಾಯ ಧನ

ಆಲಮಟ್ಟಿ: ಕಾಶ್ಮೀರದಲ್ಲಿ ಉಗ್ರಗಾಮಿ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಗುರು ಕುಟುಂಬಕ್ಕೆ ತಮ್ಮ ಸಂಬಳದಲ್ಲಿ ಹಾಗೂ ನಿವೃತ್ತಿ ಬಳಿಕ ಕೊನೆ ಉಸಿರು ಇರುವವರೆಗೂ 500 ರೂ. ಕೊಡುವುದಾಗಿ ಆಲಮಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಸಂಜೀವಪ್ಪ ನಾಯ್ಕೋಡಿ ಘೋಷಿಸಿದ್ದಾರೆ.

ಉಗ್ರನ ದಾಳಿ ವಿಷಯ ತಿಳಿದಾಗಿನಿಂದ ಹುತಾತ್ಮ ಯೋಧನ ಕುಟುಂಬಕ್ಕೆ ಏನಾದರೂ ಮಾಡಬೇಕೆಂದು ಮನಸ್ಸು ತುಡಿಯುತ್ತಿತ್ತು ಇದಕ್ಕಾಗಿ ಈ ಅಲ್ಪಸಹಾಯವನ್ನು ಮಾಡುತ್ತಿದ್ದು ಇದರಲ್ಲೇನು ವಿಶೇಷವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗೆ ಪತ್ರ ಬರೆದು ನನ್ನ ಸಂಬಳದಲ್ಲೇ ಆ ನೊಂದ ಕುಟುಂಬಕ್ಕೆ ಹಣ ಕೊಡುವುದಾಗಿ ತಿಳಿಸಿರುವ ನಾಯ್ಕೋಡಿ ತಿಳಿಸಿದ್ದಾರೆ.

ದೇಶ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗುವ ಯೋಧರ ಬಗ್ಗೆ ಹಾಗೂ ದೇಶಪ್ರೇಮದ ಬಗ್ಗೆ ಪಠ್ಯದಲ್ಲಿ ಸೇರಿಸುವ ಅವಶ್ಯಕತೆ ಇದೆ. ನಾವೆಲ್ಲರೂ ದೇಶಾಭಿಮಾನ ಹಾಗೂ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದರು. ಪೊಲೀಸ್ ಅಧಿಕಾರಿಯ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.