ಒಳ್ಳೆಯ ಗುಣ ಬೆಳೆಸಿಕೊಂಡು ಉನ್ನತಿ ಕಾಣಿ

ಆಲಮಟ್ಟಿ: ವಿದ್ಯೆ ಜತೆಗೆ ನಯ, ವಿನಯ, ಸದ್ಗುಣ, ಭಕ್ತಿ, ಶ್ರದ್ಧೆ, ಗೌರವಿಸುವಂಥ ಒಳ್ಳೆಯ ಗುಣಗಳು ಇಂದಿನ ವಿದ್ಯಾರ್ಥಿಗಳು ಮೇಳೈಸಿಕೊಂಡು ಬದುಕಿನಲ್ಲಿ ಉನ್ನತಿ ಕಾಣಬೇಕು ಎಂದು ಡಂಬಳ-ಗದಗ ಎಡೆಯೂರ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಆಲಮಟ್ಟಿಯಲ್ಲಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕರ್ನಾಟಕ ಗಾಂಧಿ ಹರ್ಡೆಕರ ಮಂಜಪ್ಪ ಸ್ಮಾರಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಲಿಂ. ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ಯಶಸ್ವಿಯ ಫಲ ಪಡೆಯಲು ಪರಿಶ್ರಮಗಳಾಗಲೇಬೇಕು. ಬೇರೆ ಮಾಗೋಪಾಯವಿಲ್ಲ. ವಿದ್ಯಾರ್ಥಿಗಳ ಬದುಕು ತಪಸ್ವಿಗಳ ಜೀವನ ಇದ್ದ ಹಾಗೆ ಆ ನಿಟ್ಟಿನಲ್ಲಿ ಏಕಾಗ್ರತೆಯ ಅಧ್ಯಯನ ಅಗತ್ಯ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಗದುಗಿನ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಮಾತನಾಡಿ, ಮಂಜಪ್ಪನವರ ಹೆಸರು ಉಳಿಸುವುದಕ್ಕಾಗಿ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಸಾಕಷ್ಟು ಶ್ರಮಿಸಿದ್ದಾರೆ. ಭವ್ಯ ಸ್ಮಾರಕ, ಕಂಚಿನ ಪುತ್ಥಳಿ, ಸಮಾಧಿ ಸ್ಥಳಾಂತರ ಕಾರ್ಯ ಕೈಕೊಂಡು ಮಂಜಪ್ಪನವರಿಗೆ ಲಿಂ.ತೋಂಟದ ಶ್ರೀಗಳು ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದರು.

ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಎನ್.ಕೆ. ಕುಂಬಾರ, ಪ್ರಾಚಾರ್ಯ ಎಸ್.ಬಿ. ಪಾಟೀಲ, ಮುಖ್ಯಶಿಕ್ಷಕ ಎಸ್.ಐ. ಗಿಡ್ಡಪ್ಪಗೋಳ, ಜಿ.ಎಂ. ಕೋಟ್ಯಾಳ, ನಿವೃತ್ತ ಮುಖ್ಯಶಿಕ್ಷಕ ವಿ.ಎಂ. ಪಟ್ಟಣಶೆಟ್ಟಿ, ಬಿ.ಎನ್. ಗುಣದಾಳ ಇತರರಿದ್ದರು.

ಸುರೇಶಗೌಡ ಪಾಟೀಲ ಸ್ವಾಗತಿಸಿದರು. ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿ, ವಂದಿಸಿದರು.

ಶಾಲೆ-ಕಾಲೇಜುಗಳಿಗೆ ಸಿದ್ಧರಾಮ ಶ್ರೀ ಭೇಟಿ

ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯಡಿ ನಡೆಯುತ್ತಿರುವ ವಿವಿಧ ಶಾಲೆ-ಕಾಲೇಜುಗಳಿಗೆ ಗದುಗನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಭೇಟಿ ಶೈಕ್ಷಣಿಕ ವ್ಯವಸ್ಥೆ ಪರಿಶೀಲಿಸಿದರು.

ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ 20 ನೇ ಪೀಠಾಧಿಪತಿಯಾದ ಬಳಿಕ ಪ್ರಥಮ ಬಾರಿಗೆ ಆಲಮಟ್ಟಿಗೆ ಆಗಮಿಸಿದ ಶ್ರೀಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಡಾ.ಸಿದ್ಧರಾಮ ಶ್ರೀ ಮೊದಲು ಹರ್ಡೆಕರ ಮಂಜಪ್ಪ ಸ್ಮಾರಕ ಭವನಕ್ಕೆ ತೆರಳಿ ಮಂಜಪ್ಪನವರ ಕಂಚಿನ ಪುತ್ಥಳಿಗೆ ಹೂಮಾಲೆ ಹಾಕಿ ನಮಿಸಿದರು.