ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಿ

ಆಲಮಟ್ಟಿ: ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಿ, ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಆಲಮಟ್ಟಿಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ ವ್ಯಾಪ್ತಿಯ ಕೆಬಿಜೆಎನ್​ಎಲ್, ಕೃಷಿ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ನಾರಾಯಣಪುರ ಜಲಾಶಯ ವ್ಯಾಪ್ತಿಯ ನಿಷೇಧಿತ ಬೆಳೆ ಭತ್ತವನ್ನು ರಕ್ಷಿಸಲು ನೀರು ಹರಿಸಲಾಗುತ್ತಿದ್ದು, ಅದನ್ನು ನಿಲ್ಲಿಸಬೇಕು ಎಂದರು.

ಎಆರ್​ಬಿಸಿ ಕಾಲುವೆ ನೀರಾವರಿ ಬೇಡಿಕೆ ಕಡಿಮೆಯಿದ್ದು, ಹಿಂಗಾರು ಬೆಳೆಗಳಿಗೂ ನೀರು ಹರಿಸಬೇಕು. ಅದಕ್ಕಾಗಿ ತಕ್ಷಣ ಐಸಿಸಿ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ನೀರಾವರಿ ಅಲ್ಲೋಲ-ಕಲ್ಲೋಲ ಉಂಟಾಗಿದ್ದರೂ, ಸಚಿವ ಶಿವಾನಂದ ಪಾಟೀಲರಿಗೆ ರೈತರ ಸಮಸ್ಯೆಯ ಅರಿವಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಆಲಮಟ್ಟಿ ಎಡದಂಡೆ ಕಾಲುವೆಗೆ ಕೊನೆ ಭಾಗಕ್ಕೆ ನೀರು ಹರಿಸಲು ನ.16 ರಿಂದ ಪಾದಯಾತ್ರೆಯ ಮೂಲಕ ಸಂಚರಿಸಿ ರೈತರ ಸಮಸ್ಯೆ ನಿವಾರಿಸಲಾಗುವುದು. ಕಾಲುವೆ ಕೊನೆ ಭಾಗಕ್ಕೆ ನೀರು ಏಕೆ ಬರುತ್ತಿಲ್ಲ ಎಂಬುದನ್ನು ಅಧಿಕಾರಿಗಳ ಜತೆ ಖುದ್ದು ಅಧ್ಯಯನ ನಡೆಸಿ, ಸಮಸ್ಯೆ ನಿವಾರಿಸಲಾಗುವುದು ಎಂದರು.

ನೀರು ಬಳಕೆದಾರರ ಸಂಘ: ಇಲ್ಲಿವರೆಗೂ ಎಎಲ್​ಬಿಸಿ ವ್ಯಾಪ್ತಿಯಲ್ಲಿ 44 ನೀರು ಬಳಕೆದಾರರ ಸಂಘ ರಚನೆಯಾಗಬೇಕಿದ್ದರೂ, ಸದ್ಯ ಕೇವಲ 12 ಮಾತ್ರ ರಚನೆಯಾಗಿವೆ. ಅದಕ್ಕಾಗಿ ಶೀಘ್ರವೇ ನೀರು ಬಳಕೆದಾರರ ಸಂಘ ರಚಿಸಿ, ಅವರಿಗೆ ಕಾಲುವೆ ಮೇಲ್ವಿಚಾರಣೆ ಹೊಣೆ ನೀಡಲಾಗುವುದು ಎಂದರು.

ಸಮ್ಮಿಶ್ರ ಸರ್ಕಾರ ಬಂದ ಮೇಲೆ ನೀರಾವರಿ ಕಾಮಗಾರಿಗಳು ನಿಂತು ಹೋಗಿವೆ. ಕೆಬಿಜೆಎನ್​ಎಲ್ ಅಕ್ಷರಶಃ ಅನಾಥವಾಗಿದೆ ಎಂದರು.

ಕೆಬಿಜೆಎನ್​ಎಲ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮೊದಲಿನ ಜಿಲ್ಲೆಯ ರಾಜಕಾರಣಿಗಳ ನಿರ್ಲಕ್ಷ್ಯಂದ ನಾರಾಯಣಪುರ ಭಾಗಕ್ಕೆ ಹೆಚ್ಚಿನ ನೀರಿನ ಹಂಚಿಕೆಯಾಗಿದೆ. ಅದಕ್ಕಾಗಿ ಕರ್ನಾಟಕದ ಪಾಲಿನ ನೀರಿನ ಮರು ಹಂಚಿಕೆಯಾಗಬೇಕು.

| ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ

Leave a Reply

Your email address will not be published. Required fields are marked *