ಅಧೀಕ್ಷಕ ಇಂಜಿನಿಯರ್​ಗೆ ಘೇರಾವ್

>

ಆಲಮಟ್ಟಿ: ನಮಗೆ ನೀರು ಕೊಡಬೇಕು ಇಲ್ಲವೆ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ತಿಮ್ಮಾಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರು ಸ್ಥಳೀಯ ಕೆಬಿಜೆಎನ್​ಎಲ್ ಅಧೀಕ್ಷಕ ಇಂಜಿನಿಯರ್ ವಾಹನ ತಡೆದು ಶನಿವಾರ ಘೇರಾವ್ ಹಾಕಿದರು.

ತಿಮ್ಮಾಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಬಾಗಲಕೋಟೆ ತಾಲೂಕಿನ ಭೈರಮಟ್ಟಿ, ಇಂಗಳಗಿ ಹಾಗೂ ಬಸರಿಕಟ್ಟಿ ಗ್ರಾಮಗಳಿಗೆ ಎರಡೂ ಹಂಗಾಮಿನಲ್ಲಿ ಸಮರ್ಪಕವಾಗಿ ನೀರು ಹರಿಯದೆ ಇರುವುದರಿಂದ ಜನ- ಜಾನುವಾರು ಚಳಿಗಾಲದಲ್ಲಿಯೇ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಬೇಸಿಗೆಯಲ್ಲಿ ರೈತರು ಜಾನುವಾರುಗಳ ನೀರು ಹಾಗೂ ಮೇವಿಗಾಗಿ ಗುಳೇ ಹೋಗುವ ಪರಿಸ್ಥಿತಿ ಒದಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂಗಾರು ಹಂಗಾಮಿನ ನೀರಾವರಿ ಸಲಹಾಸಮಿತಿ ಸಭೆಯಲ್ಲಿ ತೀರ್ವನಿಸಿದಂತೆ ನಮ್ಮ ಕಾಲುವೆಗಳಿಗೆ ನೀರು ಒದಗಿಸಬೇಕಾಗಿತ್ತು. ಆದರೂ ಆಲಮಟ್ಟಿ ಬಲದಂಡೆ ಕಾಲುವೆಯ ಮುಖ್ಯಸ್ಥಾವರ (ಜಾಕ್​ವೆಲ್) ದಲ್ಲಿ ವಿದ್ಯುತ್ ಅವಘಡದಿಂದ ತಿಂಗಳುಗಟ್ಟಲೇ ನೀರೆತ್ತುವ ಪಂಪ್​ಗಳು ಸ್ಥಗಿತಗೊಂಡಿದ್ದವು. ಇದರಿಂದ ಕಾಲುವೆಗಳಿಗೆ ನೀರು ಹರಿಯಲಿಲ್ಲ, ಕೊನೆಗೆ ನ್ಯಾಯೋಚಿತವಾಗಿ ಕೊಡಬೇಕಾದ ನೀರನ್ನಾದರೂ ಕೊಡಬೇಕಲ್ಲವೇ?. ನ.25ರಿಂದ ಕಾಲುವೆಗಳಿಗೆ ನೀರು ಹರಿಸುತ್ತಿದ್ದರೂ ಇದುವರೆಗೂ ನಮ್ಮ ಗ್ರಾಮಗಳಿಗೆ ನೀರು ತಲುಪಿಲ್ಲ. ನೀರಾವರಿ ನಿಯಮದಂತೆ ಮೊದಲು ಕಾಲುವೆ ಕೊನೆಯಂಚಿನ ರೈತರ ಜಮೀನಿಗೆ ನೀರೊದಗಿಸಬೇಕಾಗಿತ್ತು. ಆದರೆ ಅಧಿಕಾರಿಗಳ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಕಾಲುವೆ ಕೊನೆಯಂಚಿನ ಗ್ರಾಮಗಳಿಗೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿದರು.

ಅಧೀಕ್ಷಕ ಇಂಜಿನಿಯರ್ ಎಸ್.ಎಂ. ಜೋಷಿ ಮಾತನಾಡಿ, ಈ ಕುರಿತು ಈಗಾಗಲೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಅಧ್ಯಕ್ಷರ ಆದೇಶದ ಮೇರೆಗೆ ಡಿ.4 ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು. ನಿರ್ವಹಣಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ವೆಂಕಟೇಶ ಹಳ್ಳೂರ, ಬಸವರಾಜ ಬಳೂಲದ, ಪ್ರಭು ಅಳವಂಡಿ, ಗುರುಬಸಪ್ಪ ವಡ್ಡರಕಲ್ಲ, ರಾಮಣ್ಣ ಮೂಕಿ, ರಾಮನಗೌಡ ಮೇಟಿ, ಭೀಮಶಿ ಪೂಜಾರ, ಸಂಗಣ್ಣ ಹುಡೇದ, ಶಂಕ್ರಪ್ಪ ಪಡಿಯಣ್ಣವರ ಇತರರಿದ್ದರು.