ಫೆ.4 ರಿಂದ ಶಿಕ್ಷಕರ ಸಾಹಿತ್ಯ ಸಮ್ಮೇಳನ

ಆಲಮಟ್ಟಿ: ಆಲಮಟ್ಟಿಯಲ್ಲಿ ಫೆ.4 ಮತ್ತು 5 ರಂದು ಎರಡು ದಿನ ಧಾರವಾಡ ವಲಯದ 6ನೇ ಶಿಕ್ಷಕರ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಧಾರವಾಡ ವಲಯದ 8 ಜಿಲ್ಲೆಗಳ ಆಯ್ದ 400 ಕ್ಕೂ ಅಧಿಕ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಲಯ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಆಲಮಟ್ಟಿಯ ಆರ್​ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ಬುಧವಾರ ಈ ಸಮ್ಮೇಳನದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಹಾಗೂ ಧಾರವಾಡ ಅಪರ ಆಯುಕ್ತ ಕಾರ್ಯಾಲಯ ವತಿಯಿಂದ ಈ ಸಮ್ಮೇಳನ ನಡೆಯಲಿದ್ದು, ಶಿಕ್ಷಕರ ಪೂರಕ ಸಾಹಿತ್ಯ ರಚನೆಗೆ ಪೂರಕವಾಗಿ 5 ಗೋಷ್ಠಿಗಳು ಜರುಗಲಿವೆ ಎಂದರು.

ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ನಾನು 1990 ರ ದಶಕದಲ್ಲಿ ಪಠ್ಯಕ್ಕೆ ಪೂರಕವಾದ ಯಾವುದೇ ಸಾಹಿತ್ಯ, ಮಾಹಿತಿಯಿರಲಿಲ್ಲ. ಈ ಕೊರತೆ ನೀಗಿಸಬೇಕೆಂಬ ಉದ್ದೇಶದಿಂದ 1992 ರಲ್ಲಿ ಶಿಕ್ಷಣ ಸಾಹಿತ್ಯದ ಮೊದಲ ಸಮ್ಮೇಳನ ಆಲಮಟ್ಟಿಯಲ್ಲಿಯೇ ನಡೆದಿತ್ತು, ಈಗ ಆರನೇ ಸಮ್ಮೇಳನವೂ ಇಲ್ಲಿಯೇ ನಡೆಯುತ್ತಿದೆ ಎಂದರು.

ವಿಜಯಪುರ ಉಪನಿರ್ದೇಶಕ ಎಂ.ಎಂ. ಸಿಂಧೂರ ಮಾತನಾಡಿ, ಸಮ್ಮೇಳನದಲ್ಲಿ 600ಕ್ಕೂ ಹೆಚ್ಚು ಆಯ್ದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಅವರಿಗೆ ಎರಡು ದಿನ ಅಗತ್ಯವಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗುವುದು. ಶಿಕ್ಷಕರು ಇನ್ನಷ್ಟು ಸ್ಮಾರ್ಟ್ ಆಗಲು ಸಮ್ಮೇಳನ ಪೂರಕವಾಗಲಿದೆ ಎಂದರು.

ನಿವೃತ್ತ ನಿರ್ದೇಶಕ ಶಿಕ್ಷಣ ತಜ್ಞ ಎಸ್.ಆರ್. ಮನಹಳ್ಳಿ ಮಾತನಾಡಿ, ಪಠ್ಯಕ್ರಮ ರಚನೆಯ ಹಿಂದಿನ ಉದ್ದೇಶದ ಅರಿವು ಶಿಕ್ಷಕರಲ್ಲಿರಬೇಕಿದೆ. ನಲಿಕಲಿ ಸಾಕಷ್ಟು ಉಪಯುಕ್ತ ಅಂಶಗಳಿದ್ದರೂ ಅದು ಬಹುತೇಕ ಶಾಲೆಯಲ್ಲಿ ವಿಫಲವಾಗಿದೆ ಎಂದರು.

ಸಹ ನಿರ್ದೇಶಕ ಬಿ.ಕೆ.ಎಸ್. ವರ್ಧನ ಮಾತನಾಡಿ, ಶಿಕ್ಷಣ ಪರಿಣಾಮಕಾರಿಯಾಗಿ ವರ್ಗಬೋಧನೆಯಲ್ಲಿ ಜಾರಿಯಾಗುವಲ್ಲಿ ಈ ಸಮ್ಮೇಳನ ಪೂರಕವಾಗಲಿದೆ. ಸದ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಹೊಸ ಚಟುವಟಿಕೆಗಳಲ್ಲಿನ ಪೂರಕ ಮಾಹಿತಿ ಕೊರತೆ ಕಾರಣ ಸ್ಥಗಿತ ಸ್ಥಿತಿ ಬಂದೊದಗಿದೆ. ಆ ಜಿಡ್ಡನ್ನು ಹೊಡೆದೋಡಿಸುವುದು ಅಧಿಕಾರಿಗಳ ಕರ್ತವ್ಯ. ಕೇವಲ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಬದಲು, ಅವರನ್ನು ಉತ್ತಮವಾಗಿ ಕಲಿಸುವಂತೆ ಪ್ರೇರೇಪಣೆ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂದರು.

ಬಾಗಲಕೋಟೆ ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಕುಂದಗೋಳ, ಡಯಟ್ ಪ್ರಾಚಾರ್ಯ ಪಿ.ಟಿ. ಬೋಂಗಾಳೆ ಸೇರಿದಂತೆ ಅವಳಿ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಡಯಟ್ ಉಪನ್ಯಾಸಕರು, ಅಕ್ಷರದಾಸೋಹ ಅಧಿಕಾರಿಗಳು ಇದ್ದರು.

ಎಸ್.ಎ. ಮುಜಾವರ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಸಾಯಿರಾಬಾನು ಖಾನ್ ವಂದಿಸಿದರು.