300 ತಜ್ಞ ವೈದ್ಯರ ನೇಮಕಾತಿ ಪೂರ್ಣ

ಆಲಮಟ್ಟಿ: 300 ತಜ್ಞ ವೈದ್ಯರ ನೇಮಕಾತಿ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡಲಾಗಿದೆ. 300 ಎಂಬಿಬಿಎಸ್ ವೈದ್ಯರ ನೇಮಕಾತಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಮುಂದಿನ ತಿಂಗಳು ಅವರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

1800 ಶುಶ್ರೂಷಕಿಯರ ನೇಮಕಾತಿಯೂ ಅಂತಿಮ ಹಂತದಲ್ಲಿದೆ. ನಿಡಗುಂದಿ ಹಾಗೂ ಕೊಲ್ಹಾರ ಪಟ್ಟಣಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸದ್ಯ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ನಿಡಗುಂದಿ, ಗೊಳಸಂಗಿ ಎರಡು ಗ್ರಾಮಗಳು ರಾಷ್ಟ್ರೀಯ ಹೆದ್ದಾರಿ 50 ರ ಮೇಲಿರುವುದರಿಂದ ಈ ಎರಡು ಆಸ್ಪತ್ರೆಗಳಿಗೆ ಸಕಲ ಸೌಲಭ್ಯ ಒದಗಿಸಲಾಗುವುದು ಎಂದು ಬೇನಾಳದಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬೇನಾಳ, ಗೋನಾಳ, ಆಲಮಟ್ಟಿ ಭಾಗದಲ್ಲಿ ವೈರಲ್ ಫೀವರ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯೇ ಮುಖ್ಯ ಕಾರಣ. ಅವರು ಕಾಲ ಕಾಲಕ್ಕೆ ಚರಂಡಿ, ಗಲೀಜು ನೀರು ಒಂದೆಡೆ ಸೇರದಂತೆ ಕ್ರಮ ವಹಿಸಬೇಕು. ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯ, ಅಧಿಕಾರಿಗಳು ಗ್ರಾಮ ಸ್ವಚ್ಛತೆ ಕಡೆ ಗಮನಹರಿಸಬೇಕು. ಚರಂಡಿಗೆ ಮೇಲಿಂದ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿ, ಫಾಗಿಂಗ್ ನಡೆಸಬೇಕು ಎಂದರು.

ತಾಯಿ ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಎಂಸಿಎಚ್ ಆಸ್ಪತ್ರೆ ಆರಂಭಿಸಲಾಗುತ್ತಿದೆ. ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎಂಸಿಎಚ್ ಆಸ್ಪತ್ರೆ ಕಟ್ಟಡ ಈ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.