ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲು

ಆಲಮಟ್ಟಿ: ಅಪ್ರಾಪ್ತ, ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡರಾತ್ರಿ ದೂರು ದಾಖಲಾಗಿದೆ.

ರಾತ್ರಿಯಿಂದಲೆ ಇಡೀ ಗ್ರಾಮ ಹಾಗೂ ಶವ ಪರೀಕ್ಷೆ ನಡೆಸುವ ನಿಡಗುಂದಿ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಭಾರಿ ಭದ್ರತೆ ಮಧ್ಯೆ ನಿಡಗುಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮರಣೋತ್ತರ ಪರೀಕ್ಷೆ ನಡೆಯಿತು. ಮಂಗಳವಾರ ಬೆಳಗ್ಗೆ ಸ್ವಗ್ರಾಮ ಚಿಮ್ಮಲಗಿ ಪುನರ್ವಸತಿ ಕೇಂದ್ರ ಭಾಗ-2 ರಲ್ಲಿ ಶವಸಂಸ್ಕಾರ ನಡೆಸಲಾಯಿತು.

ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ಆರಂಭಗೊಂಡಿದ್ದ ಪ್ರತಿಭಟನೆ, ಸಂಬಂಧಿಕರ ಆಕ್ರೋಶ ಮಂಗಳವಾರವೂ ಮುಂದುವರಿದಿತ್ತು. ಘಟನಾ ಸ್ಥಳಕ್ಕೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಶೀಘ್ರದಲ್ಲೆ ದುಷ್ಕರ್ವಿುಗಳನ್ನು ಬಂಧಿಸುವ ಭರವಸೆ ನೀಡಿದರು.

ಪ್ರತಿಭಟನೆ: ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ, ಪ್ರತಿಭಟನೆ ವ್ಯಕ್ತವಾಗುತ್ತಲಿದೆ. ಕಾಮುಕರ ಅಟ್ಟಹಾಸಕ್ಕೆ ಮುಗ್ಧ ಬಾಲಕಿ ಬಲಿಯಾಗಿದ್ದು, ಬುದ್ಧಿಮಾಂದ್ಯ ಬಾಲಕಿಯನ್ನೂ ಬಿಡದ ನೀಚ ಕಾಮುಕರ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಮಂಗಳವಾರ ಫೋರೆನ್ಸಿಕ್ ತಜ್ಞರು ವೈದ್ಯಕೀಯ ಪರೀಕ್ಷೆ ನಡೆಸಿದರು. 10 ಕ್ಕೂ ಹೆಚ್ಚು ಪಿಎಸ್​ಐಗಳು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.