ನೀರು ಪೂರೈಕೆಗೆ ಶಾಶ್ವತ ಯೋಜನೆ

ಆಲಮಟ್ಟಿ: ಬಸವನಬಾಗೇವಾಡಿ ಮತಕ್ಷೇತ್ರದ ಶೇ. 95 ರಷ್ಟು ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಯ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ಬೇನಾಳ ಆರ್​ಸಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ದ್ವಾರ ಬಾಗಿಲು, ಕಾಂಪೌಂಡ್, ಕಸ ವಿಲೇವಾರಿ ವಾಹನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮತಕ್ಷೇತ್ರದ 12 ಬಾಂದಾರ, 14 ಕೆರೆಗಳನ್ನು ಈ ಬಾರಿ ಕೃಷ್ಣಾ ನದಿಯಿಂದ ಭರ್ತಿ ಮಾಡಲಾಗಿದ್ದು, ಇದರಿಂದ ಮುಂದಿನ ಜೂನ್​ವರೆಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ ಎಂದರು.

ವಿಜಯಪುರ ನಗರದಲ್ಲಿ ಹೃದಯ, ಕ್ಯಾನ್ಸರ್, ಟ್ರೋಮಾ ಚಿಕಿತ್ಸೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ವಣಕ್ಕೆ 88 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೇನಾಳದಲ್ಲಿಯೂ ಹೆಲ್ತ್ ಅವೇರನೆಸ್ ಸೆಂಟರ್ ಆರಂಭಿಸಿ ಇಲ್ಲಿಯ ಆಸ್ಪತ್ರೆ ಕೊರತೆ ನೀಗಿಸಲಾಗುವುದು ಎಂದರು.

ಸಚಿವ ಶಿವಾನಂದ ಪಾಟೀಲರಿಗೆ ಬೇನಾಳ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಉದಂಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಬೂಬ ಬಿಳೇಕುದರಿ, ಗುರಪ್ಪ ಚಲವಾದಿ, ತಾಪಂ ಇಒ ಚಂದ್ರಕಾಂತ ಮೇಗೇರಿ, ಎಸ್.ಜಿ. ಭೋಸಲೆ, ಎನ್. ಕುಮಾರ, ಬಸವರಾಜ ಬಿಸಲಕೊಪ್ಪ, ಸೈದಮ್ಮ ಬೆಣ್ಣಿ, ಲಕ್ಷ್ಮಣ ಚನಗೊಂಡ, ಗ್ಯಾನಪ್ಪಗೌಡ ಬಿರಾದಾರ, ಎಸ್.ಆರ್. ವಿಭೂತಿ, ರಂಗನಗೌಡ ಬಿರಾದಾರ, ಶಾಂತಪ್ಪ ಮನಗೂಳಿ, ಎಸ್.ಎಸ್. ಪೂಜಾರಿ, ಬುಡ್ಡೆಸಾಬ ಬಾಗವಾನ, ಸಿದ್ದು ಗೊಳಸಂಗಿ, ಜಿ.ಸಿ. ಮುತ್ತಲದಿನ್ನಿ ಇದ್ದರು. ಗ್ರಾಮಸ್ಥರು ಗ್ರಾಮದ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಪತ್ರವನ್ನು ಸಚಿವರಿಗೆ ನೀಡಿದರು.

ಎಂ.ಡಿ. ಪತ್ತೇಪುರ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಬಿ.ಎಚ್. ಗಣಿ ವಂದಿಸಿದರು.