ಕಾಡಿನಿಂದ ಆವರಿಸಿದ ‘ಅಲಗುಮೂಲೆ’

ಚೋಳರ ಕಾಲದ ಕುರುಹುಗಳು ಲಭ್ಯ

 • ಎಸ್.ಲಿಂಗರಾಜು ಮಂಗಲ ಹನೂರು
  ಕಾಡಿನಿಂದ ಆವೃತ್ತವಾಗಿದ್ದ ಅಲಗಮಲೈ ಗ್ರಾಮ ಕಾಲಾನಂತರ ಅಲಗುಮೂಲೆ ಎಂಬುದಾಗಿ ಕರೆಯಲ್ಪಟ್ಟಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ.
 • ಹಿನ್ನೆಲೆ: ಅಲಗುಮೂಲೆ ಗ್ರಾಮ ಸಂಪೂರ್ಣ ಅರಣ್ಯ ಪ್ರದೇಶದಿಂದ ಕೂಡಿದ್ದು, ಬೆಟ್ಟಗುಡ್ಡಗಳ ಸಾಲು ಈ ಗ್ರಾಮವನ್ನು ಸುತ್ತುವರಿದಿದೆ. ನೂರಾರು ವರ್ಷಗಳ ಹಿಂದೆ ಈ ಪ್ರದೇಶ ಆನೆ, ಹುಲಿ, ಚಿರತೆ, ಜಿಂಕೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳ ವಾಸಸ್ಥಾನವಾಗಿತ್ತು.
 • ಕಾಲಕ್ರಮೇಣ ಇಲ್ಲಿ ಜನರು ವಾಸಿಸಲು ಪ್ರಾರಂಭಿಸಿದರು. ಕಾಡಿನಿಂದ ಆವೃತವಾಗಿದ್ದ ಈ ಪ್ರದೇಶವನ್ನು ಅಂದಿನ ಜನರು ಅಲಗಮಲೈ (ಅಲಗ ಎಂದರೆ ಸಾಲು ಮಲೈ ಎಂದರೆ ಕಾಡು) ಎಂದು ನಾಮಕರಣ ಮಾಡಿಕೊಂಡರು. ಈ ಗ್ರಾಮ ಕಾಡಂಚಿನ ಕೊನೆಯ ಮೂಲೆಯಲ್ಲಿದ್ದ ಪರಿಣಾಮ ಇಲ್ಲಿನ ನಿವಾಸಿಗಳು ಅಲಗುಮೂಲೆ ಎಂಬುದಾಗಿ ಕರೆದುಕೊಂಡರು.
 • ಐತಿಹಾಸಿಕ ಕುರುಹುಗಳಾಗಿ ಈ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ಮಲ್ಲೇಶ್ವರಸ್ವಾಮಿ ದೇಗುಲ ಸೇರಿದಂತೆ ಇತರ ಹಲವು ದೇಗುಲಗಳಿದ್ದು ಇಲ್ಲಿ ಪೂಜೆ ಪುನಸ್ಕಾರಗಳ ಜತೆಗೆ ವಿಶೇಷ ಉತ್ಸವಗಳು ಜರುಗುತ್ತವೆ.
 • ಇಂದಿನ ಹನೂರು ತಂಜಾವೂರಿನ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ಈ ಭಾಗದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ಹಲವು ದೇಗುಲಗಳನ್ನು ಕಾಣಬಹುದು. ಇದರಿಂದ ಈ ಭಾಗದಲ್ಲಿ ಚೋಳರ ಪ್ರಭಾವ ಇತ್ತೆಂದು ನಂಬಲಾಗಿದೆ. ಅಲಗುಮೂಲೆ ಗ್ರಾಮದಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಮೂರು ವರ್ಷಕ್ಕೊಮ್ಮೆ, ಹನ್ನೆರಡು ವರ್ಷಕ್ಕೊಮ್ಮೆ ಜಾತ್ರೆ ಜರುಗಲಿದ್ದು, ಕೊಂಡೋತ್ಸವ ನಡೆಯಲಿದೆ.
 • ಗ್ರಾಮದಲ್ಲಿರುವ ದೇವಸ್ಥಾನಗಳು: ಮುಂಬೆಟ್ಟದ ಮೇಲೆ ಕೆಂಡಗಣ್ಣಸ್ವಾಮಿ ದೇವಾಲಯವಿದೆ. ಗ್ರಾಮದಲ್ಲಿ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಬೇಕಾದರೂ ಈ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸುವುದು ವಾಡಿಕೆ. ಇಂದಿಗೂ ಇಲ್ಲಿ ತಿಂಗಳಿಗೊಮ್ಮೆ ಪೂಜಾ, ಕೈಂಕರ್ಯಗಳು ನಡೆಯುತ್ತವೆ. ಅಲ್ಲದೇ ಗ್ರಾಮದಲ್ಲಿರುವ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ಮೂರು ವರ್ಷಕ್ಕೊಮ್ಮೆ, ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಕೊಂಡೋತ್ಸವ ನಡೆಯುತ್ತದೆ. ಕೆಂಡಗಣ್ಣಸ್ವಾಮಿ ಗದ್ದಿಗೆ, ನೆಲಗಡೆಯ ದೇವಸ್ಥಾನ ಸೇರಿದಂತೆ ಇತರ ಹಲವು ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳನ್ನು ಕಾಣಬಹುದು.
 • ಹಳದಿ ಕೊಂಡೋತ್ಸವ: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಹಳದಿ ಕೊಂಡೋತ್ಸವ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈ ಕೊಂಡೋತ್ಸವದಂದು ಉಪವಾಸ ವ್ರತ ಕೈಗೊಂಡಿರುವ ಭಕ್ತರು ಗ್ರಾಮದ ಹೊರವಲಯದಲ್ಲಿರುವ ನೆಲಗಡೆಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ನಂತರ ದೇವಸ್ಥಾನದ ಬಳಿ ಇರುವ ಮರದ ಕೆಳಗೆ ಕಗ್ಗಲಿ ಸೌದೆಯನ್ನು ಇಟ್ಟು ಬೆಂಕಿ ಬರುವಂತೆ ಪೂಜಿಸಲಾಗುತ್ತದೆ. ಈ ಬೆಂಕಿಯ ಕೊಳ್ಳಿಯನ್ನು ಗ್ರಾಮಕ್ಕೆ ತಂದು ಕೊಂಡೋತ್ಸವ ನಡೆಸಲಾಗುತ್ತದೆ. ಈ ಕೊಂಡಕ್ಕೆ ಹೊದಿಸುವ ಹಳದಿ ಬಟ್ಟೆ ಸುಟ್ಟು ಹೋಗದಿರುವುದು ಇಲ್ಲಿನ ವಿಸ್ಮಯ. ಇದರಿಂದಾಗಿಯೇ ಈ ಕೊಂಡೋತ್ಸವಕ್ಕೆ ಹಳದಿ ಕೊಂಡೋತ್ಸವ ಎಂದು ಹೆಸರು ಬಂದಿದೆ.
  ಹುಣ್ಣಿಮೆ ಸೇವೆ: ಅಲಗುಮೂಲೆ ಗ್ರಾಮದಲ್ಲಿರುವ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಕಾರ್ತಿಕ ಮಾಸದ ಹುಣ್ಣಿಮೆ ಆಚರಿಸಲಾಗುತ್ತದೆ. ಈ ವೇಳೆ ಇಲ್ಲಿನ ಮುಂಬೆಟ್ಟದಿಂದ ದೇವರ ಮೂರ್ತಿಯನ್ನು ಗ್ರಾಮಕ್ಕೆ ತಂದು ಪೂಜೆ ಸಲ್ಲಿಸಲಾಗುತ್ತದೆ. ಅಂದು ಇಡೀ ರಾತ್ರಿ ಕಥೆಯನ್ನು ಏರ್ಪಡಿಸಲಾಗಿರುತ್ತದೆ. ಬೆಳಗಿನ ಜಾವ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದೇ ವೇಳೆ ಇಲ್ಲಿನ ಜನರು ಪಲ್ಲರ ಸೇವೆ ಎಂಬುದಾಗಿ ಆಚರಿಸುತ್ತಾರೆ.
 • ಅಲಗುಮೂಲೆ ಗ್ರಾಮ ಜಿಲ್ಲಾ ಕೇಂದ್ರ ಚಾಮರಾಜನಗರದಿಂದ 50 ಕಿಮೀ ಹಾಗೂ ತಾಲೂಕು ಕೇಂದ್ರ ಹನೂರಿನಿಂದ 7 ಕಿಮೀ ದೂರದಲ್ಲಿದೆ. ಗ್ರಾಮಕ್ಕೆ ಕೊಳ್ಳೇಗಾಲದಿಂದ ಮಂಗಲ-ಗುಂಡಾಪುರ ಮಾರ್ಗ ಹಾಗೂ ಹನೂರಿನಿಂದ ಚಿಂಚಳ್ಳಿ ಮೂಲಕ ಹೋಗಬಹುದು. ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಅಲ್ಲದೆ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಅಲ್ಲದೇ ಆಸ್ಪತ್ರೆ, ಬ್ಯಾಂಕ್ ಸೌಲಭ್ಯಗಳಿಂದ ವಂಚಿತವಾಗಿದೆ.

ಅಲಗುಮೂಲೆ ಕಾಡಂಚಿನ ಗ್ರಾಮವಾವಾಗಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಇಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿದ ಮಲ್ಲೇಶ್ವರಸ್ವಾಮಿ, ಕೆಂಡಗಣ್ಣಸ್ವಾಮಿ ಗದ್ದಿಗೆ, ಬಸವೇಶ್ವರ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಿವೆ. ಇಲ್ಲಿ ನಡೆಯುವ ಕೊಂಡೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆ, ಆಸ್ಪತ್ರೆ ಸೌಲಭ್ಯ ಕಲ್ಪಿಸಿದರೆ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ.
> ಮಹದೇವಪ್ಪ, ಗ್ರಾಮಸ್ಥ

Leave a Reply

Your email address will not be published. Required fields are marked *