ಕರುಣಾನಿಧಿ ನಿರ್ಗಮನದ ಬೆನ್ನಿಗೇ ಡಿಎಂಕೆಯಲ್ಲಿ ಸೋದರರ ಸವಾಲ್​; ನಾಯಕತ್ವಕ್ಕಾಗಿ ಹಗ್ಗಜಗ್ಗಾಟ

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ನಿರ್ಗಮನವಾಗಿ ಇನ್ನೂ ವಾರ ಕಳೆದಿಲ್ಲ. ಅದಾಗಲೇ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗ)ನಲ್ಲಿ ನಾಯಕತ್ವಕ್ಕಾಗಿ ಸಹೋದರರ ನಡುವೆಯೇ ಹಗ್ಗಜಗ್ಗಾಟ ಏರ್ಪಟ್ಟಿದೆ. ಕರುಣಾನಿಧಿ ಅವರ ಮತ್ತೊಬ್ಬ ಪುತ್ರ ಎಂ.ಕೆ ಅಳಗಿರಿ ಅವರು ತಮ್ಮನೇ ಆದ ಎಂ.ಕೆ ಸ್ಟಾಲಿನ್​ ವಿರುದ್ಧವೇ ಉತ್ತರಾಧಿಕಾರಕ್ಕಾಗಿ ಪೈಪೋಟಿಗೆ ಬಿದ್ದಿದ್ದಾರೆ.

ಚೆನ್ನೈನ ಮರಿನಾ ಬೀಚ್​ನಲ್ಲಿರುವ ಕರುಣಾನಿಧಿ ಅವರ ಸಮಾಧಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ” ನನ್ನ ತಂದೆಯ ನೈಜ ಸಂಬಂಧಿಗಳು(ಪಕ್ಷದ ಮಟ್ಟಿಗೆ) ನನ್ನ ಕಡೆ ಇದ್ದಾರೆ. ತಮಿಳುನಾಡಿನಲ್ಲಿರುವ ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. ಈ ಹಿಂದೆ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಬೇಸರವಿದೆ. ಅಷ್ಟನ್ನು ಮಾತ್ರ ನಾನು ಹೇಳಬಯಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಅಳಗಿರಿ ಅವರು ಒಂದು ಕಾಲಕ್ಕೆ ಪಕ್ಷದಲ್ಲಿ ಪ್ರಬಲ ನಾಯಕರಾಗಿದ್ದವರು. ಪಕ್ಷದ ಉಸ್ತುವಾರಿ, ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದ ಅವರು, ಮುದುರೈ ಪ್ರಾಂತ್ಯದಲ್ಲಿ ಪಕ್ಷವನ್ನು ಡಿಎಂಕೆಯನ್ನು ಶಾಲಿಯಾಗಿ ಸಂಘಟಿಸಿದ್ದರು. 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು, ಚುನಾವಣೆಯಲ್ಲಿ ಗೆದ್ದು ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಪಕ್ಷದಲ್ಲಿ ನಿರ್ಲಕ್ಷಿಸಲ್ಪಟ್ಟ ಅವರು ಹಂತ ಹಂತವಾಗಿ ತಂದೆ ಹಾಗೂ ಡಿಎಂಕೆಯಿಂದ ದೂರವಾಗಿದ್ದರು.

ಕರುಣಾನಿಧಿ ಅವರೂ, ತಮ್ಮ ನಂತರ ಸ್ಟಾಲಿನ್​ ಅವರೆ ನಾಯಕ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸ್ಟಾಲಿನ್​ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ಪಕ್ಷದಲ್ಲಿ ತಮ್ಮ ನಂತರದ ಕಾರ್ಯಾಧ್ಯಕ್ಷ ಸ್ಥಾನ ನೀಡಿ ತಮ್ಮ ಉತ್ತರಾಧಿಕಾರಿ ಸ್ಟಾಲಿನ್​ ಅವರೇ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದರು.

ಹೀಗಿರುವಾಗಲೇ ಸಮಾರಂಭವೊಂದರಲ್ಲಿ, “ನಾನಿರುವಷ್ಟು ದಿನ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುತ್ತೇನೆ. ನನ್ನ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ನಿಮ್ಮ ಮಧ್ಯೆ ಕುಳಿತಿರುವ ಸ್ಟಾಲಿನ್​ ಎನ್ನುವುದನ್ನು ಮರೆಯಬೇಡಿ,” ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಆದರೆ, ಅಳಗಿರಿ ಅವರು ಮಾತ್ರ ತಾವು ತಂದೆಯನ್ನು (ಕರುಣಾನಿಧಿ) ಅವರನ್ನು ಬಿಟ್ಟು ಯಾರನ್ನೂ ನನ್ನ ನಾಯಕ ಎಂದು ಒಪ್ಪಿಕೊಳ್ಳುವುದಿದಲ್ಲ ಎಂದೇ ಹೇಳಿದ್ದರು.

ಕರುಣಾನಿಧಿ ಅವರು ಜೀವಂತವಿರುವಷ್ಟು ದಿನ ತಣ್ಣಗಿದ್ದ ನಾಯಕತ್ವದ ವಿಚಾರ ಈಗ ಅವರ ನಿಧಾನಾನಂತರ ದುತ್ತೆಂದು ಮೇಲೆದ್ದಿದೆ. ಈ ಹಿನ್ನೆಲೆಯಲ್ಲಿ ನಾಲೆ ನಡೆಯಲಿರುವ ಪಕ್ಷ ಕಾರ್ಯಕಾರಿ ಸಮಿತಿ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.

ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಅಳಗಿರಿ

ಎಂ.ಕೆ ಅಳಗಿರಿ ಮತ್ತು ಎಂ.ಕೆ ಸ್ಟಾಲಿನ್​ ನಡುವೆ ಮೊದಲಿನಿಂದಲೂ ಇದ್ದ ಮನಸ್ತಾಪ, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ವಿಷಯದಲ್ಲಿ ತಾರಕಕ್ಕೇರಿತ್ತು. ಪಕ್ಷದಲ್ಲಿ ತಮಗೆ ಆಗುತ್ತಿದ್ದ ಹಿನ್ನಡೆಯಿಂದ ಸಿಟ್ಟಿಗೆದ್ದಿದ್ದ ಅಳಗಿರಿ, ಪಕ್ಷ ಮತ್ತು ಅಭ್ಯರ್ಥಿಗಳ ವಿರುದ್ಧ ಕಟು ಟೀಕೆ ಮಾಡಿದ್ದರು. ಅಲ್ಲದೆ, ವರಿಷ್ಠ ಮಂಡಳಿಯ ನಡೆಯನ್ನೂ ಖಂಡಿಸಿದ್ದರು. ಈ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದ ಅಳಗಿರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯ ಗುಣಗಾನ ಆರಂಭಿಸಿದ್ದರು. ಈ ಎಲ್ಲಾ ವಿದ್ಯಮಾನಗಳಿಂದ ಸಿಟ್ಟಿಗೆದ್ದ ಡಿಎಂಕೆ ವರಿಷ್ಠ ಮಂಡಳಿ ಅಳಗಿರಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿತ್ತು.

ಮಗನ ಉಚ್ಚಾಟನೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕರುಣಾನಿಧಿ, ‘‘ಪಕ್ಷದಿಂದ ಅಮಾನತುಗೊಳಿಸಿ ನೀಡಿರುವ ನೋಟಿಸ್‌ಗೆ ಅಳಗಿರಿ ಉತ್ತರಿಸಿಲ್ಲ. ಬದಲಾಗಿ ಪಕ್ಷ ಮತ್ತು ಮುಖಂಡರ ವಿರುದ್ಧ ಮತ್ತೆ ಟೀಕಿಸಿದ್ದಾರೆ. ಹೀಗಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅನ್ಬಳಗನ್ ಜತೆ ಚರ್ಚಿಸಿ ವಜಾ ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ಹೇಳಿದ್ದರು.