ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಬಂಧನ

ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದ ಅಲ್​ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನ್ಸರ್​ ಗಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ. ಇದರಿಂದಾಗಿ ಭಾರಿ ಅನಾಹುತವೊಂದನ್ನು ತಪ್ಪಿಸಿದಂತಾಗಿದೆ.

ಜಮ್ಮುವಿನ ಗಾಂಧಿನಗರ ಪ್ರದೇಶದಲ್ಲಿ ಭಾನುವಾರ 25 ವರ್ಷದ ಇರ್ಫಾನ್​ ಹುಸೈನ್​ ವಾನಿ ಎಂಬ ಉಗ್ರನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನಿಂದ 8 ಗ್ರನೇಡ್​ ಮತ್ತು 60 ಸಾವಿರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಉಗ್ರನ ವಿಚಾರಣೆ ನಡೆಸಲಾಗುತ್ತಿದ್ದು, ಆತ ಎಲ್ಲೆಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಮತ್ತು ಆತನ ಸಹಚರರ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ದೆಹಲಿ ಪೊಲೀಸರ ವಿಶೇಷ ತಂಡ ಜಮ್ಮುವಿಗೆ ಆಗಮಿಸಿದ್ದು ಉಗ್ರನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಷ್ಕರ್​ ಉಗ್ರನ ಬಂಧಿಸಿದ ಎನ್​ಐಎ

ಲಷ್ಕರ್​ ಎ ತೋಯ್ಬಾ ಸಂಘಟನೆಯ ಉಗ್ರ ಶೇಖ್​ ಅಬ್ದುಲ್​ ನಯೀಮ್​ನ ಸಹಚರ ಹಬೀಬುರ್​ ರಹೆಮಾನ್​ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಹಬೀಬುರ್​ ರೆಹಮಾನ್​ನನ್ನು ಸೌದಿ ಅರೇಬಿಯಾದಿಂದ ಗಡಿಪಾರು ಮಾಡಲಾಗಿತ್ತು. ಭಾನುವಾರ ಹಬೀಬುರ್​ ದೆಹಲಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಆತನನ್ನು ಬಂಧಿಸಲಾಗಿದೆ.

ಶೇಖ್​ ಅಬ್ದುಲ್​ ನಯೀಮ್​ನನ್ನು ಎನ್​ಐಎ 2017ರ ನವೆಂಬರ್​ನಲ್ಲಿ ಬಂಧಿಸಿತ್ತು. ನಯೀಮ್​ ಮತ್ತು ಈಗ ಬಂಧಿತನಾಗಿರುವ ಹಬೀಬುರ್​ ರೆಹಮಾನ್ ಸೇರಿದಂತೆ ನಯೀಮ್​ನ 10 ಸಹಚರರ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಸಲಾಗಿತ್ತು.

ಭಾರತದಲ್ಲಿ ಉಗ್ರ ದಾಳಿ ನಡೆಸಲು ಸೂಕ್ತ ಸ್ಥಳಗಳನ್ನು ಹುಡುಕುವಂತೆ ಲಷ್ಕರ್​ ಎ ತೋಯೆಬಾ ಸಂಘಟನೆ ನಯೀಮ್​ಗೆ ಸೂಚಿಸಿತ್ತು. ಅದರಂತೆ ಆತ ದೇಶಾದ್ಯಂತ ಸಂಚರಿಸಿ ದಾಳಿ ನಡೆಸಬಹುದಾದ ಸ್ಥಳಗಳನ್ನು ಗುರುತಿಸಿದ್ದ. ಈ ಸಂದರ್ಭದಲ್ಲಿ ನಯೀಮ್​ಗೆ ಹಬೀಬುರ್​ ರೆಹಮಾನ್​ ಆಶ್ರಯ ಒದಗಿಸಿದ್ದ ಮತ್ತು ಹಣಕಾಸಿನ ನೆರವು ನೀಡಿದ್ದ. ಹಬೀಬುರ್​ ರೆಹಮಾನ್​ಗೆ ಪಾಕಿಸ್ತಾನದಲ್ಲಿರುವ ಲಷ್ಕರ್​ ಎ ತೋಯ್ಬಾದ ಕಮಾಂಡರ್​​ನಿಂದ ಸೂಚನೆ ದೊರೆಯುತ್ತಿತ್ತು ಎಂದು ಎನ್​ಐಎಯ ವಕ್ತಾರ ತಿಳಿಸಿದ್ದಾರೆ. (ಏಜೆನ್ಸೀಸ್​)