24 ಜೋಡಿ ಸಾಮೂಹಿಕ ವಿವಾಹ

ಮಡಿಕೇರಿ: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಬಡ ಮತ್ತು ಅನಾಥ ಕನ್ಯೆಯರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಗರದ ಕಾವೇರಿ ಹಾಲ್‌ನಲ್ಲಿ ಭಾನುವಾರ ನಡೆಯಿತು.
24 ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಧುಗಳಿಗೆ ತಲಾ 5 ಪವನ್ ಚಿನ್ನಾಭರಣ ಹಾಗೂ ಉಡುಪು ನೀಡಲಾಯಿತು.
ಸಮಿತಿಯ ಮಹಾಪೋಷಕರಾದ ಮಾಜಿ ಶಾಸಕ ಸುಂಟಿಕೊಪ್ಪದ ಇಬ್ರಾಹಿಂ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ವಿವಾಹವೆಂದರೆ, ಆಡಂಬರದ ಕಾರ್ಯಕ್ರಮ ಎಂಬಂತಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬಡ ಹೆಣ್ಣುಮಕ್ಕಳು ಮದುವೆ ಇಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ. ಇಂತಹ ಮಕ್ಕಳ ವಿವಾಹಕ್ಕೆ ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಇದು ಬೇಸರದ ಸಂಗತಿ ಎಂದು ಹೇಳಿದರು.
ದೇವರ ಮುಂದೆ ಎಲ್ಲರೂ ಒಂದೇ. ಜೀವಂತವಾಗಿದ್ದಾಗಲೇ ಜನಸೇವೆ ಮಾಡಿ ಸ್ವರ್ಗದ ಬಾಗಿಲು ತಟ್ಟಬೇಕು. ಬಡವರು ಸಮಾಜದಲ್ಲಿ ದುಃಖಿಗಳಾಗಬಾರದು ಎಂಬ ಹಿನ್ನೆಲೆಯಲ್ಲಿ ಸಮಿತಿ ಮುಂದುವರಿಯುತ್ತಿದ್ದು, ಸದಸ್ಯರ ಪರಿಶ್ರಮದಿಂದಾಗಿ ಈ ಕಾರ್ಯ ಸಾಗುತ್ತಿದೆ ಎಂದು ಸ್ಮರಿಸಿದರು.
ಸಮಿತಿಯ ಸ್ಥಾಪಕ ಅಬ್ದುಲ್ ಲತೀಫ್ ಹಾಜಿ ಮಾತನಾಡಿ, 13 ವರ್ಷಗಳಿಂದ ಸಮುದಾಯದ ಏಳಿಗೆಗಾಗಿ ಹಲವಾರು ಉತ್ತಮ ಕಾರ್ಯಗಳನ್ನು ದಾನಿಗಳ ಸಹಕಾರದಿಂದ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಮಡಿಕೇರಿ ಬದ್ರಿಯಾ ಜಮಾಅತ್ ಖತೀಬರಾದ ಉಮರ್ ಸಖಾಫಿ ಉಸ್ತಾದ್, ಕೇರಳ ವಡಗರದ ಸಯ್ಯದ್ ಅಬ್ದಲ್ ಸಲಾಂ ಖಾಸಿಂ ತಂಙಳ್, ಅಲ್ ಅಮೀನ್ ಸಮಿತಿ ಅಧ್ಯಕ್ಷ, ನಿವೃತ ತಹಸೀಲ್ದಾರ್ ಎಫ್.ಎ.ಮಹಮ್ಮದ್ ಹಾಜಿ, ಮಮ್ಮುಹಾಜಿ, ಬಷೀರ್ ಹಾಜಿ, ಉದ್ಯಮಿ ಸದಕ್ಕಲಿ, ಹುಸೇನ್ ಪಾಲ್ಗೊಂಡಿದ್ದರು. ಎಂ.ಇ.ಮಹಮ್ಮದ್ ಹಾಜರಿದ್ದರು.

Leave a Reply

Your email address will not be published. Required fields are marked *