ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್ಫುಲ್-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ ಮೂಹೂರ್ತ ಇಂದು ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಅಕ್ಷಯ್ ಮತ್ತು 2017ರ ವಿಶ್ವ ಸುಂದರಿ ಹಾಗೂ ಚಿತ್ರದ ನಾಯಕಿ ಮಾನುಷಿ ಚಿಲ್ಲರ್ ಪೂಜಾ ಮೂಹೂರ್ತದಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದಾಗಿದೆ. ಇವರೊಂದಿಗೆ ನಟಿ ರಾಣಿ ಮುಖರ್ಜಿ ಅವರನ್ನು ನೋಡಬಹುದಾಗಿದೆ.
ರಾಜಾ ಪೃಥ್ವಿರಾಜ್ ಜಗತ್ತಿಗೆ ಕಾಲಿಡುತ್ತಿದ್ದೇವೆ. ಅದರ ಒಳ್ಳೆಯ ಆರಂಭ ಇಲ್ಲಿದೆ. 2020ರ ದೀಪಾವಳಿಗೆ ಚಿತ್ರಮಂದಿರಕ್ಕೆ ಪೃಥ್ವಿರಾಜ್ ಲಗ್ಗೆ ಇಡಲಿದ್ದಾನೆ. ಯಾವಾಗಲೂ ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆ ಹೀಗೆ ಇರಲೆಂದು ವಿಡಿಯೋ ಕುರಿತು ಅಕ್ಷಯ್ ಬರೆದುಕೊಂಡಿದ್ದಾರೆ. ಮಾನುಷಿ ಕೂಡ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡು ಆಶೀರ್ವಾದ ಸಿಕ್ಕಿದಂತೆ ಭಾಸವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾಜಾ ಪೃಥ್ವಿರಾಜ್ ಪಾತ್ರದಲ್ಲಿ ಮಿಂಚಲಿದ್ದರೆ, ಮಾನುಷಿ ಲವರ್ ಗರ್ಲ್ ಸಾನ್ಯೋಗಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಮಾನುಷಿ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಚಿತ್ರವನ್ನು ಚಂದ್ರಪ್ರಕಾಶ್ ದ್ವಿವೇದಿ ಅವರು ನಿರ್ದೇಶಿಸುತ್ತಿದ್ದು, ವೈಆರ್ಎಫ್ ನಿರ್ಮಾಣದ ಮೊದಲನೇ ಇತಿಹಾಸ ಆಧಾರಿತ ಚಿತ್ರವಾಗಿದೆ. (ಏಜೆನ್ಸೀಸ್)