ಅಕ್ಷಯ್​ ಕುಮಾರ್ ​ಹೌಸ್​ಫುಲ್​ 4 ಚಿತ್ರೀಕರಣದಿಂದ ಹಿಂದೆ ಸರಿದಿದ್ದೇಕೆ ಗೊತ್ತಾ?

ಮುಂಬೈ: #MeToo ಅಭಿಯಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಾಲಿವುಡ್​ನ ಶಿಸ್ತಿನ ಸಿಪಾಯಿ ಖ್ಯಾತಿಯ ಅಕ್ಷಯ್​ ಕುಮಾರ್​ ಇಟಲಿಯಿಂದ ತವರಿಗೆ ಮರಳಿದ ಕೂಡಲೇ ತಮ್ಮ ಮುಂದಿನ ಚಿತ್ರ ಹೌಸ್​ಫುಲ್​ 4ರ ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ತಮ್ಮ 28 ವರ್ಷದ ಚಿತ್ರರಂಗದ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣದಿಂದ ಹಿಂದೆ ಸರಿದಿರುವ ಅಕ್ಷಯ್​, ನಿರ್ದೇಶಕ ಸಾಜಿದ್​ ಖಾನ್​ ಮತ್ತು ನಟ ನಾನಾ ಪಾಟೇಕರ್​ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ತನಿಖೆ ಮುಗಿಯುವವರೆಗೂ ಚಿತ್ರೀಕರಣ ರದ್ದು ಪಡಿಸುವಂತೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿದ್ದವು. ಆದರೀಗ ಸ್ವತಃ ಅವರೇ ಈ ಕುರಿತು ಹೇಳಿಕೊಂಡಿದ್ದು, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವವರ ಜತೆ ಕೆಲಸ ಮಾಡಲು ಇಷ್ಟವಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಚಿತ್ರದ ನಿರ್ಮಾಪಕರಿಗೆ ಸ್ಪಷ್ಟವಾಗಿ ತಿಳಿಸಿರುವ ಅಕ್ಷಯ್, ಆರೋಪದ ಕುರಿತು ತನಿಖೆ ಪೂರ್ಣಗೊಳ್ಳುವವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಈ ಆರೋಪಗಳು ಕೇಳಿಬರುತ್ತಿದ್ದಂತೆ ಸಾಜಿದ್​ ಖಾನ್​ ನಿರ್ದೇಶಕನ ಸ್ಥಾನದಿಂದ ಅಧಿಕೃತವಾಗಿ ಕೆಳಗಿಳಿದಿದ್ದಾರೆ.

ಸಾಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ ರಾಚೆಲ್ ವೈಟ್, ಸಹಾಯಕ ನಿರ್ದೇಶಕಿ ಸಲೊನಿ ಚೋಪ್ರಾ ಮತ್ತು ಪತ್ರಕರ್ತೆ ಕರೀಶ್ಮಾ ಉಪಾಧ್ಯಾಯ್ ಗುರುವಾರ ಸಂಜೆ #MeToo ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಈಗಾಗಲೇ ಹೌಸ್​ಫುಲ್​ ಚಿತ್ರದ ಶೇ.70ರಷ್ಟು ಚಿತ್ರೀಕರಣ ಲಂಡನ್​ ಮತ್ತು ಜೈಸಲ್ಮೇರ್​ನಲ್ಲಿ ಪೂರ್ಣಗೊಂಡಿದ್ದು, ಇನ್ನು ಶೇ.30ರಷ್ಟು ಭಾಗ ಮಾತ್ರ ಬಾಕಿಯಿದೆ. ಸಾಜಿದ್​ ನಾಡಿಯಾದ್ವಾಲಾ ಚಿತ್ರ ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್)