ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಿ

ಕುಮಟಾ: ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಅಬಕಾರಿ ಅಧಿಕಾರಗಳು ಕಡಿವಾಣ ಹಾಕದಿದ್ದರೆ ತಹಸೀಲ್ದಾರ್​ರೊಂದಿಗೆ ಖುದ್ದು ತಪಾಸಣೆ ನಡೆಸಿ ಸ್ಥಳದಲ್ಲೇ ಪ್ರಕರಣ ದಾಖಲಿಸುವುದಾಗಿ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ಮಿರ್ಜಾನ್ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಹಾಗೂ ಪಿಂಚಣಿ ಅದಾಲತ್ ಸಭೆಯಲ್ಲಿ ನಡೆಯಿತು.

ಸಭೆಯಲ್ಲಿ ಅಕ್ರಮ ಸಾರಾಯಿ ಮಾರಾಟದ ಕುರಿತು ಗಮನ ಸೆಳೆದ ಹೆಗಡೆ ಪಂಚಾಯಿತಿ ಸದಸ್ಯೆ ಜಯಾ ಮುಕ್ರಿ, ಹೆಗಡೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಕಡೆ ಅಂಗಡಿಗಳಲ್ಲಿ ಮಾತ್ರವಲ್ಲದೇ ಮನೆಗಳಲ್ಲೂ ಅಕ್ರಮ ಸರಾಯಿ ಮಾರಾಟ ನಡೆದಿದೆ. ಹಲವು ಬಾರಿ ಪರಿಶಿಷ್ಟರು ಹಾಗೂ ಹಾಲಕ್ಕಿ ಮಹಿಳೆಯರೊಟ್ಟಿಗೆ ಬೀದಿಗಿಳಿದು ಪ್ರತಿಭಟಿಸಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕುಡಿತದ ಚಟಕ್ಕೆ ಹಲವಾರು ಕುಟುಂಬಗಳು ಸಂಕಟಪಡುತ್ತಿವೆ. ಹೆಣ್ಣಿನ ಕಣ್ಣೀರಿಗೆ ಕೊನೆಯಿಲ್ಲದಂತಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.

ಹೆಗಡೆಯಲ್ಲಿ ಮಾತ್ರವಲ್ಲ , ತಾಲೂಕಿನ ಹಲವು ಕಡೆಗಳಲ್ಲಿ ಇಂಥದ್ದೆ ಪರಿಸ್ಥಿತಿ ಇದೆ ಎಂದು ಮಿರ್ಜಾನ ಭಾಗದ ಜನರು ಸಭೆಯಲ್ಲಿ ತಿಳಿಸಿದರು. ತಕ್ಷಣ ಸಭೆಯಲ್ಲಿದ್ದ ಅಬಕಾರಿ ಅಧಿಕಾರಿಯನ್ನು ಕರೆದು ಖಡಕ್ ಆಗಿ ಸೂಚನೆ ನೀಡಿದ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್, ಅಕ್ರಮ ಸಾರಾಯಿ ಮಾರಾಟ ತಡೆಯಲೇಬೇಕು. ಮತ್ತೆ ದೂರುಗಳು ಬಂದಲ್ಲಿ ನಾನೇ ಖುದ್ದು ತಪಾಸಣೆ ನಡೆಸಿ ಪ್ರಕರಣ ದಾಖಲಿಸಬೇಕಾದೀತು ಎಂದು ಎಚ್ಚರಿಸಿದರು.

ತಾ.ಪಂ. ಸದಸ್ಯ ಈಶ್ವರ ನಾಯ್ಕ ಮಾತನಾಡಿ, ಬಿಪಿಎಲ್ ಕಾರ್ಡ್​ನವರ ಮೂಲ ಸ್ಥಿತಿಗತಿ ತಿಳಿದುಕೊಂಡು ಆದಾಯ ನಿರ್ಣಯಿಸಿ. ಒಟಿಪಿ ಸರ್ವೆ ಮಾನದಂಡ ಸರಿಯಾಗಿಲ್ಲ ಎಂದರು. ಮಿರ್ಜಾನ ಹೋಬಳಿ ಮಟ್ಟದ ಎಲ್ಲ ಕಂದಾಯ ನಿರೀಕ್ಷಕರು ಮನೆಮನೆಗೆ ತೆರಳಿ ಅರ್ಜಿ ಪರಿಶೀಲಿಸಿ ಆದಾಯ ಗುರುತಿಸಿ ಎಂದು ಉಪವಿಭಾಗಾಧಿಕಾರಿ ಸೂಚಿಸಿದರು.

ದಿವಗಿ ಪಂಚಾಯಿತಿ ಸದಸ್ಯ ಹೇಮಂತಕುಮಾರ ಗಾಂವಕರ, ಸಾರ್ವಜನಿಕರಿಗೆ ಅಗತ್ಯಕ್ಕೆ ತಕ್ಕಷ್ಟೇ ಮರಳು ಖರೀದಿಸಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

ಹೆಗಡೆಯ ಅಮರನಾಥ ಭಟ್ಟ, ಹೆಸ್ಕಾಂ ಕಾರ್ಯಾಲಯದಲ್ಲಿ ಎಲ್​ಇಡಿ ಬಲ್ಬ್ ವಿತರಿಸಲಾಗುತ್ತಿತ್ತು. ಈಗ ಯಾರೂ ಇಲ್ಲ. ಗ್ಯಾರಂಟಿ ಅವಧಿಯೊಳಗೆ ಹಾಳಾದ ಬಲ್ಬ್ ಬದಲಾವಣೆಗೂ ಅವಕಾಶವಿಲ್ಲ ಎಂದು ಗಮನ ಸೆಳೆದರು. ಹೆಸ್ಕಾಂ ಎಇಇ ಪಠಾಣರಿಗೆ ಕೂಡಲೇ ಸಂಬಂಧಪಟ್ಟ ಏಜೆನ್ಸಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಉಪವಿಭಾಗಾಧಿಕಾರಿ ಸೂಚಿಸಿದರು.

ಮಿರ್ಜಾನ ಉರ್ದು ಶಾಲೆ ಹತ್ತಿರ ಬಸ್​ಗಳಿಗೆ ನಿಲುಗಡೆ ನೀಡಬೇಕು ಎಂದು ಆ ಭಾಗದ ಮುಸ್ಲಿಮರು ಬೇಡಿಕೆ ಇಟ್ಟರು. ತಾಲೂಕಿನಲ್ಲಿ ಸೌಭಾಗ್ಯ ಯೋಜನೆ ಇನ್ನೂ ಜಾರಿಯಾಗದ ಕುರಿತು ಸಭೆಯಲ್ಲಿ ಆಕ್ಷೇಪಗಳು ಕೇಳಿ ಬಂದವು. ರಸ್ತೆ, ಬೀದಿ ದೀಪ, ಕಾಲುಸಂಕ, ಪಿಂಚಣಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು. ಜಿ.ಪಂ. ಸದಸ್ಯ ಪ್ರದೀಪ ನಾಯಕ, ತಹಸೀಲ್ದಾರ್ ಆಶಪ್ಪ, ಮಿರ್ಜಾ ಪಂಚಾಯಿತಿ ಅಧ್ಯಕ್ಷೆ ಯಶೋಧಾ ನಾಯ್ಕ, ಉಪಾಧ್ಯಕ್ಷೆ ನಾಗರತ್ನಾ ನಾಯ್ಕ, ತಾಪಂ ಇಒ ಸಿ.ಟಿ. ನಾಯ್ಕ, ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.