ಅಕ್ಕಿಆಲೂರ ನುಡಿ ಸಂಭ್ರಮ ಡಿ. 20ರಿಂದ

ಅಕ್ಕಿಆಲೂರ: ಸ್ಥಳೀಯ ದುಂಡಿ ಬಸವೇಶ್ವರ ಜನಪದ ಕಲಾ ಸಂಘದಿಂದ ನಡೆಸಿಕೊಂಡು ಬರಲಾಗುತ್ತಿರುವ ನುಡಿ ಸಂಭ್ರಮ-28 ಸಮಾರಂಭವನ್ನು ಡಿಸೆಂಬರ್ 20, 21 ಹಾಗೂ 22ರಂದು ಪಟ್ಟಣದಲ್ಲಿ ನಡೆಸಲು ಶುಕ್ರವಾರ ಇಲ್ಲಿನ ಸದ್ಗುರು ಐಟಿಐ ಕಾಲೇಜಿನಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ತೀರ್ವನಿಸಲಾಯಿತು.

ಕನ್ನಡ ನಾಡು- ನುಡಿ ರಕ್ಷಣೆ, ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗೆ ಗ್ರಾಮೀಣ ಪ್ರದೇಶದ ಜನರಿಂದ ಆಗಬೇಕಾದ ನಿಸ್ವಾರ್ಥ ಸೇವೆ ಹಾಗೂ ನಾಡಿನ ಪರಂಪರೆ ವೈಭವ ಅನಾವರಣಗೊಳಿಸುವ ಸಾಂಸ್ಕೃತಿಕ ಸಮಾರಂಭ ನಡೆಸಲು ನಿರ್ಧರಿಸಲಾಯಿತು. ಕನ್ನಡ ನುಡಿ ಸಂಭ್ರಮ ಸಮಾರಂಭವನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ಆಚರಿಸಲು ನಿರ್ಧರಿಸಿರುವ ದುಂಡಿ ಬಸವೇಶ್ವರ ಜನಪದ ಕಲಾಸಂಘ, ಶೋಭಾಯಾತ್ರೆ, ವೇದಿಕೆ ನಿರ್ವಹಣೆ, ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳು, ರಾತ್ರಿ ಸಾಂಸ್ಕೃತಿಕ ಸಮಾರಂಭಗಳು ಮತ್ತು ಇನ್ನಿತರ ಕಾರ್ಯಗಳ ಕುರಿತು ಪಟ್ಟಣದ ಶಾಲಾ-ಕಾಲೇಜು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳ ಜತೆ ಸುದೀರ್ಘವಾಗಿ ರ್ಚಚಿಸಿತು.

ಡಿಸೆಂಬರ್ 20ರಂದು ಬೆಳಗ್ಗೆ ಮುತ್ತಿನಕಂತಿ ಮಠದ ಆವರಣದಲ್ಲಿ ಕನ್ನಡ ಧ್ವಜಾರೋಹಣ ಜರುಗಲಿದೆ. ಕುಮಾರ ನಗರದ ಗಣೇಶ ದೇವಸ್ಥಾನದಿಂದ ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಶೋಭಾಯಾತ್ರೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾಗಲಿದೆ. ಮೂರು ದಿನಗಳ ಕಾಲ ಹಗಲು ಕೃಷಿ, ಯುವ, ಮಹಿಳಾ, ಮಕ್ಕಳ ಸೇರಿ ಇನ್ನಿತರ ಗೋಷ್ಠಿ ನಡೆಸಲಾಗುತ್ತದೆ. ಪ್ರತಿ ದಿನ ಸಂಜೆ ನಡೆಯಲಿರುವ ಸಾಂಸ್ಕೃತಿಕ ಸಮಾರಂಭದಲ್ಲಿ ನಾಡಿನ ಖ್ಯಾತ ಧಾರಾವಾಹಿ ಮತ್ತು ಚಲನಚಿತ್ರ ನಟರು, ಪ್ರಸಿದ್ಧ ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ನುಡಿಸಂಭ್ರಮ ಕಾರ್ಯಕ್ರಮದ ಸಾರಥ್ಯವನ್ನು ಸದ್ಗುರು ಐಟಿಐ ಕಾಲೇಜು ವಹಿಸಿಕೊಂಡಿದೆ.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿದ್ದರು. ವಿಜಯಪುರದ ಸಿದ್ಧಾರೂಢ ಸ್ವಾಮೀಜಿ, ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಚನ್ನವೀರ ದೇವರು, ಜಿ.ಪಂ. ಸದಸ್ಯ ಟಾಕನಗೌಡ ಪಾಟೀಲ, ದುಂಡಿಬಸವೇಶ್ವರ ಕಲಾಸಂಘದ ಅಧ್ಯಕ್ಷ ಬಸವರಾಜ ಕೋರಿ, ಕಸಾಪ ತಾಲೂಕಾಧ್ಯಕ್ಷ ನಾಗರಾಜ ಅಡಿಗ, ಬಸವರಾಜ ಸೊರಗೊಂಡರ, ಎಪಿಎಂಸಿ ಉಪಾಧ್ಯಕ್ಷೆ ಸುಜಾತ ಪಸಾರದ, ಸುಜಾತ ಕೊಲ್ಲಾವರ, ಸುಭಾಸ ಮಾಳಗಿ ಉಪಸ್ಥಿತರಿದ್ದರು.

ನುಡಿ ಸಂಭ್ರಮವನ್ನು ಕಳೆದ ಮೂರು ವರ್ಷಗಳಿಂದ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರಂಭವನ್ನಾಗಿ ಆಚರಿಸುತ್ತಿದ್ದೇವೆ. ನಮ್ಮ ದುಂಡಿ ಬಸವೇಶ್ವರ ಜನಪದ ಕಲಾ ಸಂಘದಲ್ಲಿನ ಎಲ್ಲ ಪದಾಧಿಕಾರಿಗಳು, ಸಾಲು ಸಂತೆ, ಹೋಟೆಲ್ ವ್ಯಾಪಾರಿಗಳು ಸ್ವಂತ ದುಡಿಮೆಯಲ್ಲಿ ನಾಡು ರಕ್ಷಿಸುವ ಕಾರ್ಯಕ್ಕೆ ಕೈಹಾಕಿದ್ದೇವೆ. ಜೀವ ಇರುವವರೆಗೂ ನುಡಿಸಂಭ್ರಮ ಪ್ರತಿ ವರ್ಷ ನಡೆಸಿಕೊಂಡು ಹೋಗುತ್ತೇವೆ.

| ಷಣ್ಮುಖಪ್ಪ ಮುಚ್ಚಂಡಿ, ಕಾರ್ಯದರ್ಶಿ, ದುಂಡಿ ಬಸವೇಶ್ವರ ಜನಪದ ಕಲಾಸಂಘ