ಅಲಹಾಬಾದ್​ ವಿವಿಗೆ ತೆರಳುತ್ತಿದ್ದ ಅಖಿಲೇಶ್​ ಯಾದವ್​ರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಪೊಲೀಸರು

ಲಖನೌ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ (ಅಲಹಾಬಾದ್)​ಗೆ ತೆರಳಲೆಂದು ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರನ್ನು ಪೊಲೀಸರು ತಡೆದಿದ್ದಾರೆ.

ಅಲಹಾಬಾದ್​ ವಿಶ್ವವಿದ್ಯಾಲಯದ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕವು, ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಇಂದು ನಿಗದಿ ಮಾಡಿತ್ತು. ಸಮಾರಂಭಕ್ಕೆ ಅಖಿಲೇಶ್​ ಯಾದವ್​ ಅವರನ್ನು ಆಹ್ವಾನಿಸಿತ್ತು. ಹೀಗಾಗಿ ಅಖಿಲೇಶ್​ ಇಂದು ಅಲಹಾಬಾದ್​ಗೆ ಪ್ರಯಾಣ ಬೆಳೆಸಿದ್ದರು. ವಿವಿಗೆ ತೆರಳಲೆಂದು ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಅಲ್ಲದೆ, ಸಿವಿಲ್​ ವಸ್ತ್ರದಲ್ಲಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಕೈ ಅಡ್ಡವಿಟ್ಟು ಅಖಿಲೇಶ್​ರನ್ನು ತಡೆದಿದ್ದಾರೆ. ಜತೆಗೇ, ವಿಶೇಷ ವಿಮಾನವೇರಲು ಅಖಿಲೇಶ್​ ಪ್ರಯತ್ನಿಸಿದಾಗ ವಿಮಾನದ ಮೆಟ್ಟಿಲುಗಳಿಗೆ ಅಡ್ಡಲಾಗಿ ನಿಂತು ಪ್ರತಿರೋಧ ತೋರಿದ್ದಾರೆ. ಈ ಇಡೀ ಸನ್ನಿವೇಶದ ವಿಡಿಯೊ ಮತ್ತು ಚಿತ್ರಗಳನ್ನು ಅಖಿಲೇಶ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಖಿಲೇಶ್​ ಯಾದವ್​, ” ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ವಿಚಾರದಲ್ಲಿ ಸರ್ಕಾರ ಭಯಭೀತಿಗೊಂಡಿದೆ. ಅದಕ್ಕಾಗಿಯೇ ನನ್ನನ್ನು ಏರ್​ಪೋರ್ಟ್​ನಲ್ಲಿ ತಡೆಯಲಾಗಿದೆ,” ಎಂದು ಆರೋಪಿಸಿದ್ದಾರೆ.

ಪೊಲೀಸರು ತಡೆದ ಹಿನ್ನೆಲೆಯಲ್ಲಿ ಅಖಿಲೇಶ್​ ಯಾದವ್​ ಏರ್​ಪೋರ್ಟ್​ನಿಂದ ಹೊರ ನಡೆದರು.

ಇದಕ್ಕೂ ಹಿಂದೆ ಅಲಹಾಬಾದ್​ ವಿಶ್ವವಿದ್ಯಾಲಯವು ಅಖಿಲೇಶ್​ ಯಾದವ್​ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಬರೆದಿದ್ದು, ರಾಜಕಾರಣಿಗಳಿಗೆ ವಿವಿಯ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿತ್ತು.

ಇನ್ನು ಇಂದಿನ ಘಟನೆ ಕುರಿತು ಮಾತನಾಡಿರುವ ಪೊಲೀಸರು, ” ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅಖಿಲೇಶ್​ ಯಾದವ್​ ಅವರ ಕ್ಯಾಂಪಸ್​ ಪ್ರವೇಶ ನಿರಾಕರಿಸಿತ್ತು. ಕಾನೂನು ಸುವ್ಯವಸ್ಥೆ ಪಾಲನೆ ಮಾಡುವುದು ಪೊಲೀಸರ ಕರ್ತವ್ಯ. ನಾವು ಅದನ್ನು ನಿರ್ವಹಿಸಿದ್ದೇವೆ,” ಎಂದು ಹೇಳಿದ್ದಾರೆ.