ಮಾಯಾ, ಅಖಿಲೇಶ್​ ಮೈತ್ರಿ ಮಾತುಕತೆ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ಗೆ ಪಾಲು ನೀಡದಿರಲು ತೀರ್ಮಾನ?

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಭೇಟಿಯಾಗಿರುವ ಬಹುಜನ ಸಮಾಜವಾದಿ ಪಾರ್ಟಿ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶಕ್ಕೆ ಸೀಮೀತವಾದಂತೆ ಮಾಡಿಕೊಳ್ಳಬಹುದಾದ ಮಹಾಮೈತ್ರಿಯ ಕುರಿತು ಚರ್ಚೆ ನಡೆಸಿದ್ದಾರೆ.

ದೇಶದಲ್ಲೇ ಅತಿ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ತಾವು ರಚಿಸಿಕೊಳ್ಳುತ್ತಿರುವ ಮಹಾಮೈತ್ರಿಯಲ್ಲಿ ಕಾಂಗ್ರೆಸ್​ ಅನ್ನು ಸೇರಿಸಿಕೊಳ್ಳುವುದು ಬೇಡ ಎಂದು ಎರಡೂ ಪಕ್ಷಗಳ ನಾಯಕರು ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಕಾಂಗ್ರೆಸ್​ನ ಸಾಂಪ್ರದಾಯಿಕ ಕ್ಷೇತ್ರಗಳಾಗಿರುವ, ಆ ಪಕ್ಷದ ಪ್ರಾಬಲ್ಯವಿರುವ ರಾಯ ಬರೇಲಿ ಮತ್ತು ಅಮೇಥಿ ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್​ ಗೆಲುವಿಗೆ ( ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ) ಪೂರಕವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರಲು ಎಸ್​ಪಿ, ಬಿಎಸ್​ಪಿ ನಿರ್ಧರಿಸಿವೆ ಎಂದು ಹೇಳಲಾಗಿದೆ. ಈ ಎರಡೂ ಕ್ಷೇತ್ರಗಳನ್ನೂ ಗಾಂಧಿ ವಂಶಸ್ಥರು ಹಿಂದಿನಿಂದಲೂ ಪ್ರತಿನಿಧಿಸುತ್ತಿದ್ದಾರೆ.

ಇನ್ನು ಮೈತ್ರಿಯಲ್ಲಿ ಸಣ್ಣ ಪಕ್ಷಗಳನ್ನೂ ಸೇರಿಸಿಕೊಳ್ಳುವ ಕುರಿತು ಚರ್ಚೆಯಾಗಿದ್ದು, ಜನವರಿ 15ರ ನಂತರ ಮೈತ್ರಿ, ಸೀಟು ಹಂಚಿಕೆ ಕುರಿತ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ ಮೈತ್ರಿಯಲ್ಲಿ ಸ್ಥಾನ ಪಡೆಯಲಿರುವ ಚೌದ್ರಿ ಅಜಿತ್​ ಸಿಂಗ್​ ಅವರ ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ) ಮೂರು ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ತಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್​ ಮೇಲೆ ಬಿಎಸ್​ಪಿ ನಾಯಕಿ ಮಾಯಾವತಿ ಅವರಿಗೆ ಕೋಪವೇರ್ಪಟ್ಟಿದೆ. ಇದರ ಜತೆಗೆ, ಮಧ್ಯಪ್ರದೇಶದಲ್ಲಿ ಎಸ್​ಪಿಯ ಏಕೈಕ ಶಾಸಕನನ್ನು ಮಂತ್ರಿ ಮಾಡಲಿಲ್ಲ ಎಂಬ ಸಿಟ್ಟು ಅಖಿಲೇಶ್​ ಯಾದವ್​ ಅವರಿಗಿದೆ. ಇದೇ ಕೋಪ ತಾಪವನ್ನು ಲೋಕಸಭೆ ಚುನಾವಣೆ ವರೆಗೆ ಕೊಂಡೊಯ್ದಿರುವ ಈ ಇಬ್ಬರೂ ನಾಯಕರು ಉತ್ತರ ಪ್ರದೇಶದಲ್ಲಿ ಯಾವುದೇ ಪಾಲು ನೀಡದಿರುವ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗುತ್ತಿದೆ.