ಘಟಬಂಧನ ತಡೆಯುವುದೇ ಕಮಲದ ವಿಜಯರಥ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಡುವೆ ಮೈತ್ರಿ ಏರ್ಪಟ್ಟಿರುವುದು ಬಿಜೆಪಿಗೆ ಬೃಹತ್ ಸವಾಲನ್ನು ತಂದೊಡ್ಡಿದೆ ಎಂಬುದು ನಿಜವೇ. ಆದರೆ, ಎಸ್​ಪಿ-ಬಿಎಸ್​ಪಿ ನಾಯಕರು ಒಂದಾಗಿದ್ದರೂ, ಈ ಪಕ್ಷಗಳ ಕಾರ್ಯಕರ್ತರು ಒಂದಾಗಿ ಕೆಲಸ ಮಾಡುವರೆ, ಮುನಿಸು ತೊರೆಯುವರೆ ಎಂಬುದು ಕುತೂಹಲಕರ. ಅದೇನಿದ್ದರೂ, ಚುನಾವಣೆಗೆ ಕೆಲ ತಿಂಗಳ ಮುನ್ನವೇ ಉತ್ತರ ಪ್ರದೇಶದ ರಾಜಕೀಯ ರಂಗೇರಿದೆ.

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳಲ್ಲ ಎಂಬ ಮಾತು ಮತ್ತೆ ನಿಜವಾಗುತ್ತಿದೆ. ಸಾಂಪ್ರದಾಯಿಕ ಎದುರಾಳಿ ಪಕ್ಷಗಳೆಂದೇ ಗುರುತಿಸಿಕೊಂಡಿದ್ದ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು 24 ವರ್ಷಗಳ ಬಳಿಕ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದು, ಒಟ್ಟಾಗಿ ಲೋಕಸಭೆ ಚುನಾವಣೆ ಮಾತ್ರವಲ್ಲ ಮುಂಬರುವ ವಿಧಾನಸಭೆ ಚುನಾವಣೆಯನ್ನೂ ಎದುರಿಸಲು ನಿರ್ಧರಿಸಿವೆ. ಮಾಯಾ ವಿರುದ್ಧ ಅಖಿಲೇಶ್ ಯಾದವ್, ಮುಲಾಯಂ, ಅಖಿಲೇಶ್ ವಿರುದ್ಧ ಮಾಯಾವತಿ ಮಾಡುತ್ತಿದ್ದ ಟೀಕೆಗಳು, ಸಾಧಿಸುತ್ತಿದ್ದ ರಾಜಕೀಯ ವೈರತ್ವವನ್ನು ಜನ ಇನ್ನೂ ಮರೆತಿಲ್ಲ. ಆದರೆ, ‘ಮಾಯಾವತಿಗಾಗುವ ಅವಮಾನ ನನಗಾಗುವ ಅವಮಾನ’ ಎಂದು ಅಖಿಲೇಶ್ ಹೇಳಿದ್ದು, ರಾಜಕೀಯದ ದುಶ್ಮನಿ ಎಷ್ಟು ಬೇಗ ಕರಗಿಹೋಗುತ್ತದೆ ಎಂಬುದಕ್ಕೆ ನಿದರ್ಶನ.

ನರೇಂದ್ರ ಮೋದಿ ಪಾಳಯದ ಗೆಲುವಿನ ರಥ ತಡೆಯಲು ಒಟ್ಟಾಗಿ ಹೋರಾಡುವುದೇ ಪರಿಹಾರ ಎಂಬ ತೀರ್ವನಕ್ಕೆ ಈ ಎರಡೂ ಪ್ರಮುಖ ರಾಜಕೀಯ ಪಕ್ಷಗಳು ಬಂದಿರುವುದರಿಂದ ಬಿಜೆಪಿಯ ಮುಂದಿನ ಹಾದಿ ಭಾರಿ ಸವಾಲಿನಿಂದ ಕೂಡಿದೆ. ಮೋದಿ ಅಲೆಯ ತೀವ್ರತೆ 2014ರಲ್ಲಿ ಇದ್ದಷ್ಟು ಈಗ ಇಲ್ಲದಿರುವುದು, ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೂ ಟೀಕೆಗಳ ಚಕ್ರವ್ಯೂಹ ಆವರಿಸಿಕೊಂಡಿರುವುದು ಕಮಲ ಪಾಳಯದ ಚಿಂತೆ ಹೆಚ್ಚಿಸಿದ್ದರೆ, ಪ್ರಮುಖವಾಗಿ ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದ ಬಗೆಹರಿಯದೆ, ಇನ್ನೂ ಕಗ್ಗಂಟಾಗಿಯೇ ಉಳಿದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ರಾಮಮಂದಿರ ಏಕೆ ಆಗಿಲ್ಲ ಎಂಬ ಪ್ರಶ್ನೆಗೆ ಈ ಪಕ್ಷದ ನಾಯಕರ ಬಳಿ ಸಮರ್ಥ ಉತ್ತರವಿಲ್ಲ. ಹಾಗಾಗಿ, ಚುನಾವಣೆಗೆ ಕೆಲ ತಿಂಗಳು ಇರುವಾಗಲೇ ಭಾರಿ ತಂತ್ರಗಾರಿಕೆ ಹೆಣೆದಿರುವ ಎಸ್​ಪಿ-ಬಿಎಸ್​ಪಿ ಪಕ್ಷಗಳು ಕಾರ್ಯಕರ್ತರನ್ನು ಹೇಗೆ ಒಟ್ಟಿಗೆ ಕರೆದುಕೊಂಡು ಹೋಗುತ್ತವೆ ಎಂಬುದು ಕುತೂಹಲಕರ.

ಬದಲಾದ ಸನ್ನಿವೇಶ

1992ರ ಡಿಸೆಂಬರ್ 6ರಂದು ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸದ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಬೇಕಾಗಿ ಬಂತು. ಕೆಲ ಅವಧಿಯ ರಾಷ್ಟ್ರಪತಿ ಆಳ್ವಿಕೆ ಬಳಿಕ 1993ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಿತು. ಆಗಿನ ಬಿಎಸ್​ಪಿ ಮುಖ್ಯಸ್ಥ ಕಾನ್ಶಿರಾಮ್ ಮತ್ತು ಎಸ್​ಪಿಯ ಆಗಿನ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಂಡಿದ್ದರು. ಆಗ ಎಸ್​ಪಿ 110 ಮತ್ತು ಬಿಎಸ್​ಪಿ 67 ಸೀಟು ಪಡೆದಿದ್ದವು. ಸರ್ಕಾರದಲ್ಲಿ ಭಾಗಿಯಾಗದ ಬಿಎಸ್​ಪಿ ಬಾಹ್ಯ ಬೆಂಬಲವನ್ನಷ್ಟೇ ನೀಡಿತ್ತು. ಆದರೆ, 1995ರಲ್ಲಿ ಮಾಯಾವತಿ ತಮ್ಮ ಪಕ್ಷದ ಸದಸ್ಯರ ಸಭೆ ನಡೆಸುವಾಗ ಎಸ್​ಪಿ ಕಾರ್ಯರ್ಕತರಿಂದ ದಾಳಿಗೊಳಗಾದರು. ಆ ಬಳಿಕ, ಮೈತ್ರಿ ಅಂತ್ಯಗೊಂಡಿತ್ತು. ಈ ಬಾರಿ ಮುಲಾಯಂರನ್ನು ದೂರವಿಟ್ಟೇ ಅಖಿಲೇಶ್ ಮೈತ್ರಿ ಮಾಡಿಕೊಂಡಿದ್ದಾರೆ. ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಈ ಬಗ್ಗೆ ಲೇವಡಿ ಮಾಡಿದ್ದರೆ, ಮುಲಾಯಂ ಆಪ್ತರಾಗಿದ್ದ ಅಮರ್ ಸಿಂಗ್ ಕೂಡ ‘ಇದಕ್ಕಿಂತ ಕೆಟ್ಟ ದಿನಗಳು ಎಸ್​ಪಿ-ಬಿಎಸ್​ಪಿಗೆ ಬೇರೊಂದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾತಿ ಸಮೀಕರಣ

ಉತ್ತರ ಪ್ರದೇಶದ ಜನಸಂಖ್ಯೆ 20 ಕೋಟಿಯನ್ನು ದಾಟಿದೆ. ಹತ್ತುಹಲವು ಜಾತಿಗಳ ವೋಟುಬ್ಯಾಂಕ್​ಗಳಿದ್ದು, ಆಯಾ ಪ್ರಾಂತ್ಯ, ಕ್ಷೇತ್ರಗಳಲ್ಲಿನ ಗೆಲುವಿನಲ್ಲಿ ಈ ಜಾತಿ ಸಮೀಕರಣಗಳೇ ಪ್ರಮುಖ ಪಾತ್ರ ವಹಿಸುತ್ತವೆ.

# ದಲಿತ ಸಮುದಾಯ ಈ ರಾಜ್ಯದ ಪ್ರಮುಖ ವೋಟ್​ಬ್ಯಾಂಕ್ ಆಗಿದೆ. ದಲಿತ ಮತದಾರರ ಸಂಖ್ಯೆ ಶೇ.22ರಷ್ಟಿದೆ. ಈ ಪೈಕಿ ಶೇ.14ರಷ್ಟು ಜನ ಜಾಟವ್ ಸಮುದಾಯಕ್ಕೆ ಸೇರಿದವರು. ಉಳಿದ ಶೇ.8 ದಲಿತ ವರ್ಗದಲ್ಲಿ ಧೋಭಿ, ಖಟಿಕ್, ಮುಸಹರ್, ಕೋಲಿ, ವಾಲ್ಮೀಕಿ, ಗೊಂಡ, ಖರ್​ವಾರ್ ಸೇರಿದಂತೆ 60 ಜಾತಿಗಳು ಬರುತ್ತವೆ. ದಲಿತ ಮತಬ್ಯಾಂಕ್ ಮೇಲೆ ಬಹುಜನ ಸಮಾಜ ಪಕ್ಷದ ಬಿಗಿ ಹಿಡಿತವಿದೆಯಾದರೂ, ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಮತಗಳು ಬಿಜೆಪಿಯತ್ತ ವಾಲಿದ್ದವು ಎಂಬುದು ಗಮನಾರ್ಹ.

# ಇತರೆ ಹಿಂದುಳಿದ ವರ್ಗದವರು ಅಂದರೆ ಒಬಿಸಿಯವರ ಸಂಖ್ಯೆ ಶೇ.45. ಈ ಪೈಕಿ ಶೇ.10 ಯಾವರು, ಶೇ.5 ಕುರ್ವಿು, ಶೇ.5 ಮೌರ್ಯ, ಲೋಧಿ ಶೇ.4 ಮತ್ತು ಜಾಟ್ ಶೇ.2ರಷ್ಟಿದ್ದಾರೆ. ಉಳಿದ ಶೇ.19ರಲ್ಲಿ ಮಲ್ಲಾಹ್, ಲೋಹಾರ್, ಪ್ರಜಾಪತಿ, ಚೌರಾಸಿಯಾ, ಗುರ್ಜರ್, ರಾಜ್​ಭರ್, ಬಿಂದ್, ಬಿಯಾರ್, ನಿಷಾದ್, ಕಹಾರ್ ಮತ್ತು ಕುಮ್ಹಾರ್ ಸಮೇತ 100ಕ್ಕೂ ಹೆಚ್ಚು ಉಪಜಾತಿಗಳಿವೆ. ಒಬಿಸಿ ಮತಬ್ಯಾಂಕ್​ಗೆ ಲಗ್ಗೆಹಾಕುವುದು ಎಸ್​ಪಿ ಮತ್ತು ಬಿಎಸ್​ಪಿ ಮುಂದಿನ ಸವಾಲಾಗಿದೆ.

# ಮುಸ್ಲಿಂ ಮತದಾರರ ಸಂಖ್ಯೆ ಶೇ. 19ರಷ್ಟಿದೆ. ಸಮಾಜವಾದಿ ಪಕ್ಷ ಬಹುತೇಕ ಈ ಮತಬ್ಯಾಂಕನ್ನೇ ನೆಚ್ಚಿಕೊಂಡಿದೆ.

# ಬ್ರಾಹಣರ ಸಂಖ್ಯೆ ಶೇ.11ರಷ್ಟಿದ್ದು, ಇದು 11 ಒಳಪಂಗಡಗಳನ್ನು ಹೊಂದಿದೆ.

ಸ್ಥಾನ ಕಳೆದುಕೊಳ್ಳಲಿದೆಯೇ ಬಿಜೆಪಿ?

2014ರ ಲೋಕಸಭೆ ಮತ್ತು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದರೆ, ಎಸ್​ಪಿ-ಬಿಎಸ್​ಪಿಯ ಒಟ್ಟು ಮತಪ್ರಮಾಣ ಹೆಚ್ಚುಕಡಿಮೆ ಬಿಜೆಪಿಗೆ ಸರಿಸಮವಾಗುತ್ತದೆ. ಹಾಗಾದರೆ, ಈ ಚುನಾವಣೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಳ್ಳಲಿದೆಯೇ ಎಂಬ ಚರ್ಚೆಯೂ ರಾಜಕೀಯ ಅಂಗಳದಲ್ಲಿ ಕೇಳಿಬರುತ್ತಿದೆ.

‘ದೆಹಲಿಯ ಗದ್ದುಗೆ ಲಖನೌ ಮೂಲಕವೇ ಹಾದುಹೋಗುತ್ತದೆ’ ಎಂಬ ಮಾತು ಉತ್ತರ ಪ್ರದೇಶದ ರಾಜಕೀಯ ಪ್ರಾಬಲ್ಯಕ್ಕೆ ಸಾಕ್ಷಿ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪರಿಣಾಮ, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 2014ರಲ್ಲಿ ಬಿಜೆಪಿ 71 (ಮತಪ್ರಮಾಣ ಶೇ.42.3), ಅದರ ಮೈತ್ರಿಪಕ್ಷ ಅಪ್ನಾ ದಳ 2 (ಮತಪ್ರಮಾಣ ಶೇ. 1.01) ಸ್ಥಾನ ಪಡೆಯುವುದರೊಂದಿಗೆ ಅಸಾಧಾರಣ ವಿಜಯ ಸಾಧಿಸಿದ್ದವು. ಮಾಯಾವತಿ ನೇತೃತ್ವದ ಬಿಎಸ್​ಪಿ ಶೇ.19.77 ಮತಗಳನ್ನು ಪಡೆದರೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂಬುದು ಗಮನಾರ್ಹ. ಐದು ಸ್ಥಾನಗಳನ್ನು ಪಡೆದ (ಇವರೆಲ್ಲ ಮುಲಾಯಂ ಕುಟುಂಬ ಸದಸ್ಯರೇ) ಎಸ್​ಪಿ ಗಳಿಸಿದ ಮತಪ್ರಮಾಣ ಶೇ.22.2. ಎರಡು ಸ್ಥಾನವಷ್ಟೇ ಪಡೆದ ಕಾಂಗ್ರೆಸ್ (ಸೋನಿಯಾ, ರಾಹುಲ್) ಸ್ಥಿತಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಈ ಬಾರಿ ಕಾಂಗ್ರೆಸ್ ಅನ್ನು ಮೈತ್ರಿಕೂಟದಿಂದ ಹೊರಗಿಟ್ಟಿರುವ ಪರಿಣಾಮ, ಕೈ ಪಾಳಯದ ಹಾದಿಯೂ ಸುಲಭ ವಾಗಿಲ್ಲ. ಎಸ್​ಪಿ ಮತ್ತು ಬಿಎಸ್​ಪಿಯ ಮತಪ್ರಮಾಣ ಜೋಡಿಸಿದರೆ ಶೇ.41.97. ಇದು ಬಿಜೆಪಿಗಿಂತ ಕೊಂಚ ಕಡಿಮೆ(ಶೇ.42.3). ಆದರೆ, ಈ ಬಾರಿ ಎಸ್​ಪಿ-ಬಿಎಸ್​ಪಿ ಒಟ್ಟಾಗಿ ಸ್ಪರ್ಧಿಸು ತ್ತಿರುವುದರಿಂದ ಮತವಿಭಜನೆ ತಪ್ಪಬಹುದು. ಇದರ ನೇರ ಪರಿಣಾಮ ಆಗೋದು ಬಿಜಿಪಿಗೇ.

ಹೀಗಿದೆ ಉತ್ತರಪ್ರದೇಶ

# ಜನಸಂಖ್ಯೆ: 20.42 ಕೋಟಿ

# ಲೋಕಸಭಾ ಸ್ಥಾನಗಳು: 80

# ರಾಜ್ಯಸಭಾ ಸ್ಥಾನಗಳು: 31

# ವಿಧಾನಸಭಾ ಸ್ಥಾನಗಳು: 404

# ಜಿಲ್ಲೆಗಳು: 75

# ವಿಶ್ವವಿದ್ಯಾಲಯಗಳು: 55

# ಸ್ಥಾಪನೆಯಾಗಿದ್ದು: 1950 ಜನವರಿ 24