ವಿಘಟನೆ ಬಿಟ್ಟು ಹಿಂದು ಸಮಾಜ ಸಂಘಟನೆ ಆಗಲಿ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ವಿಘಟನೆಯಿಂದಾಗಿ ಮನಸ್ಸಿಗೆ ನೋವುಂಟಾಗಿದ್ದು, ಹಿಂದು ಧರ್ಮದ ಎಲ್ಲ ಒಳಪಂಗಡಗಳು ಸಹೋದರರಂತೆ ಒಗ್ಗೂಡಿ ಮುನ್ನಡೆಯಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಅಖಿಲ ಹವ್ಯಕ ಮಹಾಸಭಾದಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿರುವ 2ನೇ ವಿಶ್ವ ಹವ್ಯಕ ಸಮಾವೇಶದ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸಮಾಜದಲ್ಲಿ ಒಗ್ಗಟ್ಟಿದ್ದರೆ ಬಲವಿರುತ್ತದೆ. ಸಮುದಾಯ ಬಲಿಷ್ಠಗೊಳ್ಳುವುದರಿಂದ ರಾಷ್ಟ್ರ ಬಲಿಷ್ಠವಾಗುತ್ತದೆ. ವೀರಶೈವ-ಲಿಂಗಾಯತ ಸಮುದಾಯದ ವಿಚಾರದಲ್ಲಿ ಎರಡೂ ಒಂದಾಗಿರಬೇಕೆಂದು ನಾನು ಹೇಳಿದ್ದೆ, ಅದಕ್ಕೆ ಕೆಲವರು ಆಕ್ಷೇಪಿಸಿ ಈ ವಿಚಾರದಲ್ಲಿ ಪ್ರತಿಕ್ರಿಯೆ ಏಕೆಂದು ಪ್ರಶ್ನಿಸಿದ್ದರು. ಹಿಂದು ಧರ್ಮ ಒಂದಾಗಬೇಕೆಂಬುದು ನನ್ನ ಕನಸು ಎಂದು ಹೇಳಿದರು.

ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮುದಾಯ ಸರ್ಕಾರಕ್ಕೆ ತೆರಿಗೆ ಕಟ್ಟುವುದರಿಂದ ಸೌಲಭ್ಯಗಳನ್ನು ನಿರೀಕ್ಷಿಸಲಿ. ಆದರೆ ಸರ್ಕಾರ ಮಾಡದ್ದನ್ನು ಧರ್ಮಸರ್ಕಾರವಾಗಿ ಶ್ರೀಮಠವು ತನ್ನ ಜವಾಬ್ದಾರಿ ನಿರ್ವಹಿಸಲಿದೆ. ಸಮುದಾಯದ ಸಂಘಟನೆಯಲ್ಲಿ ನಮಗೆ ನಂಬಿಕೆಯಿದ್ದು, ಸಣ್ಣ, ಪುಟ್ಟ ಗೊಂದಲಗಳಿದ್ದರೆ ಹವ್ಯಕತನಕ್ಕಾಗಿ ಮರೆಯಬೇಕು ಎಂದರು.

ಕರ್ಣಾಟಕ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್, ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ ಭೀಮೇಶ್ವರ ಜೋಶಿ, ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್ ಕಜೆ ಇದ್ದರು.

ಗೋ ತಳಿಗಳು, ಖಾದ್ಯಗಳು

ಅತ್ಯುತ್ತಮ ಹಾಲಿನ ತಳಿಯಾದ ಗುಜರಾತ್​ನ ಗೀರ್ ಪರ್ವತದ ಗೀರ್, ಪ್ರಪಂಚದ ಅತಿ ಚಿಕ್ಕ ತಳಿ (ಹೆಚ್ಚೆಂದರೆ 91 ಸೆಂ.ಮೀ.) ವೆಚೂರು ಸೇರಿ ದೇಸಿ ಗೋ ತಳಿಗಳು ಗಮನ ಸೆಳೆಯುತ್ತಿವೆ. ಜತೆಗೆ ‘ಹವ್ಯಕ ಪಾಕೋತ್ಸವ’ದಲ್ಲಿ ಹಾಲುಬಾಯಿ, ಕಾಯಿ ಹೋಳಿಗೆ, ಅತ್ರಸ ಸೇರಿ ಹವ್ಯಕರ ತಿನಿಸುಗಳು ಬಾಯಿ ರುಚಿ ಹೆಚ್ಚಿಸಿದವು.

ವಿದೇಶದಲ್ಲಿರುವ ಭಾರತೀಯರು ವಾಪಸಾಗಲಿ

ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ವಾಪಸಾಗಿ ದೇಶದ ನವನಿರ್ವಣಕ್ಕಾಗಿ ದುಡಿಯಲಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಕರೆ ನೀಡಿದರು.

75 ರೈತ ಸಾಧಕರಿಗೆ ಹವ್ಯಕ ಕೃಷಿರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆ ನಿಲ್ಲುವುದು ಆರಂಭಿಕ ಹಂತದಲ್ಲಿ ಚೆನ್ನಾಗಿರುತ್ತದೆ. ಆದರೆ, ಮಕ್ಕಳು ಇಲ್ಲಿನ ಸಂಸ್ಕೃತಿ ಮರೆಯುತ್ತಾರೆ. ಅಲ್ಲಿನ ಸಂಸ್ಕಾರವೇ ಅವರಿಗೆ ದೊರೆಯುತ್ತದೆ. ಭಾರತದಲ್ಲಿ ನೆಲೆಸಿ ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು. 2019ರ ಚುನಾವಣೆ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದು, ಹವ್ಯಕ ಸಮುದಾಯದ ಪಾತ್ರವೂ ಪ್ರಮುಖವಾಗಿರುತ್ತದೆ. ದೇಶದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸಮುದಾಯದವರು ಕೆಲಸ ಮಾಡಬೇಕೆಂದು ಹೇಳಿದರು. ಹವ್ಯಕ ಸಮುದಾಯದ ಅನೇಕರು ಉತ್ತರಕನ್ನಡ ಜಿಲ್ಲೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅಲ್ಲಿನ ಕೃಷಿ ಪದ್ಧತಿ ಜೀವಂತವಾಗಿ ಉಳಿಸುವಲ್ಲಿ ಸಮುದಾಯದ ಪಾತ್ರ ಮಹತ್ತರವಾಗಿದೆ. ಈವರೆಗೆ ಯಾವೊಬ್ಬ ಹವ್ಯಕ ರೈತ ಆತ್ಮಹತ್ಯೆಗೆ ಶರಣಾಗಿಲ್ಲ. ಸಮುದಾಯದ ಜನ ದುಂದುವೆಚ್ಚಕ್ಕೆ ಮುಂದಾಗದಿರುವುದೂ ಇದಕ್ಕೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಗ್ನಿಹೋತ್ರ ಪದ್ಧತಿಯನ್ನು ಕೃಷಿಯ ಅವಿಭಾಜ್ಯ ಅಂಗವಾಗಿಸಿಕೊಂಡು ಮುನ್ನಡೆಯಬೇಕು. ಆ ಪದ್ಧತಿಯನ್ನು ಅರಿತವರು ಇನ್ನುಳಿದ ರೈತರಿಗೂ ಮಾಹಿತಿ ಒದಗಿಸಲು ಮುಂದಾಗಬೇಕು. ಸಾಲಮನ್ನಾ ಅವಶ್ಯಕವಾಗಿದೆಯಾದರೂ ಅದು ವರ್ಷದಿಂದ, ವರ್ಷಕ್ಕೆ ರಾಜಕೀಯ ಘೋಷಣೆಯಾಗುತ್ತಿದ್ದರೆ ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತದೆ. ನಮ್ಮ ಕಡೆಯಿಂದಲೇ ತೆರಿಗೆ ರೂಪದಲ್ಲಿ 3 ಲಕ್ಷ ರೂ. ಸಂಗ್ರಹಿಸಿ 1 ಲಕ್ಷ ರೂ.ವನ್ನು ಸಾಲಮನ್ನಾ ರೂಪದಲ್ಲಿ ನಮಗೆ ವಾಪಸ್ ನೀಡುತ್ತಾರೆ. ಸಾಲ ಮಾಡುವ ಪ್ರಮೇಯವೇ ಬಾರದಂತೆ ಕೃಷಿ ಮಾಡುವ ಪದ್ಧತಿಯನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.

ವಿವಾದದಿಂದ ದೂರ ಪೇಜಾವರ ಶ್ರೀ ಹೇಳಿಕೆ

ಉಡುಪಿ: ವಿಶ್ವ ಹವ್ಯಕ ಸಮ್ಮೇಳನದ ಸಂದರ್ಭ ಉದ್ಭವಿಸಿದ ಭಿನ್ನಾಭಿಪ್ರಾಯ, ವಿವಾದಗಳಿಂದ ದೂರ ಉಳಿದಿದ್ದೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹವ್ಯಕ ಸಮಾಜದ ಬಗ್ಗೆ ವಿಶೇಷ ಅಭಿಮಾನವಿದ್ದು, ಸಮಾಜದ ಎರಡೂ ಪೀಠಗಳಲ್ಲಿಯೂ ಗೌರವವಿದೆ. ಸಮಗ್ರ ಬ್ರಾಹ್ಮಣ ಸಮಾಜದ ಸಂಘಟನೆ ದೃಷ್ಟಿಯಿಂದ ವಿವಾದದ ಬಗ್ಗೆ ತಟಸ್ಥ ನಿಲುವು ತಳೆದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದಾರೆ.