ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ ನಾಳೆಯಿಂದ

ಕರ್ನಾಟಕ ಕಲಾಭಿಮಾನಿ ಸಂಘದ ಪ್ರ. ಕಾರ್ಯದರ್ಶಿ ಡಾ.ಕುಂಟಾರ್ ಹೇಳಿಕೆ

ಹೊಸಪೇಟೆ: ನಗರದ ಪಂಪ ಕಲಾಭವನದಲ್ಲಿ ಮಾ.15, 16 ಮತ್ತು 17ರಂದು 14ನೇ ಅಖಿಲ ಭಾರತ ಮಟ್ಟದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಲಾಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ಕುಂಟಾರ್ ತಿಳಿಸಿದರು.

ಕರಾವಳಿ, ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರಕಾರದ ಯಕ್ಷಗಾನ, ಬಯಲಾಟಗಳು ಪ್ರಚಲಿತದಲ್ಲಿದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಷರಸ್ಥರು ಇವುಗಳಿಂದ ದೂರ ಉಳಿಯುವುದರಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿಲ್ಲ. ಪರಂಪರಾಗತವಾಗಿ ಬಂದಿರುವ ರಂಗ ಪ್ರಕಾರಗಳನ್ನು ಪೋಷಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ, ಮತ್ತು ಕಲಾ ಪ್ರದರ್ಶನಕ್ಕೆ ವೇದಿಕೆಯಾಗಿ ಪ್ರತಿ ವರ್ಷ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಮಾ.15ರಂದು ಸಮ್ಮೇಳನ ಅಧ್ಯಕ್ಷ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್‌ರನ್ನು ಎತ್ತಿನ ಗಾಡಿಯಲ್ಲಿ ನಗರದ ರೋಟರಿ ವೃತ್ತದಿಂದ ಕಲಾಭವನದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಮೆರವಣಿಗೆಯನ್ನು ಶಾಸಕ ಆನಂದ್‌ಸಿಂಗ್ ಉದ್ಘಾಟಿಸುವರು. ಸಂಡೂರಿನ ಪ್ರಭುದೇವರ ಸಂಸ್ಥಾನ ಮಠದ ಶ್ರೀ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಮ್ಮೇಳನದ ಸ್ಮರಣ ಸಂಚಿಕೆ ‘ಕಿರೀಟ’ ಪುಸ್ತಕವನ್ನು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್, ಯಕ್ಷಗಾನ ಪುಸ್ತಕಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್‌ಭಟ್, ಎಸ್.ಎನ್.ಪಂಜಾಜೆ ಬಿಡುಗಡೆಗೊಳಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕಂದಾವರ ರಘುರಾಮ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಭಾಗವಹಿಸುವರು. 3 ದಿನಗಳ ಸಮ್ಮೇಳನದಲ್ಲಿ ಯಕ್ಷಗಾನ, ಬಯಲಾಟದ 13 ಪ್ರಕಾರಗಳ ಪ್ರದರ್ಶನವನ್ನು ರಾಜ್ಯದ ವಿವಿಧ ಭಾಗಗಳ 13 ತಂಡಗಳು ಪ್ರಸ್ತುತಪಡಿಸಲಿವೆ ಎಂದು ತಿಳಿಸಿದರು.

ಜೀವಮಾನ ಸಾಧನೆಗೈದ ಕೆ.ಎಸ್.ಗಣಪತಿ ಭಟ್ ಸೇರಿ ಯಕ್ಷ ಸಾಧಕರನ್ನು ಸನ್ಮಾನಿಸಲಾಗುವುದು. ಶಿಕ್ಷಣ ಸಂಸ್ಥೆಗಳಿಂದ 120 ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಮಾ.17ರಂದು ಸಮಾರೋಪ ಸಮಾರಂಭದಲ್ಲಿ ಕನ್ನಡ ವಿವಿ ನಿಕಟಪೂರ್ವ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಸಮಾರೋಪ ಭಾಷಣ ಮಾಡುವರು. ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಶ್ರೀರಾಮ ಇಟ್ಟಣ್ಣವರ ಅಧ್ಯಕ್ಷತೆ ವಹಿಸುವರು. ದೀಪಕ್‌ಕುಮಾರ್ ಸಿಂಗ್, ಬೆಳಗಲ್ ವೀರಣ್ಣ ಭಾಗವಹಿಸುವರು.
|ಡಾ.ಮೋಹನ್ ಕುಂಟಾರ್ ಪ್ರ.ಕಾರ್ಯದರ್ಶಿ, ಕರ್ನಾಟಕ ಕಲಾಭಿಮಾನಿ ಸಂಘ