ಬಸವನಬಾಗೇವಾಡಿ: ಬಸವಣ್ಣನವರ ಐಕ್ಯಸ್ಥಳ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯಮಟ್ಟದ 3ನೇ ಮಹಾಸಮ್ಮೇಳನವನ್ನುಫೆ.2ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿ ಹತ್ತು ವರ್ಷಗಳಿಗೊಮ್ಮೆ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗುತ್ತದೆ. ಈ ಹಿಂದೆ 2004ರಲ್ಲಿ ಬಸವನಬಾಗೇವಾಡಿ ಹಾಗೂ 2014ರಲ್ಲಿ ಶಹಾಪುರದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಸಮ್ಮೇಳನದಲ್ಲಿ 25ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಸೇರುವ ನಿರೀಕ್ಷೆ ಇದೆ. ಫೆ.1 ರಂದು ಗ್ರಂಥಗಳ ಕುರಿತು ವಿಶೇಷ ಗೋಷ್ಠಿ ಆಯೋಜಿಸಲಾಗಿದೆ. ಸಮ್ಮೇಳನದ ದಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ರಾಷ್ಟ್ರಮಟ್ಟದ ಹಂಡೆಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್‌ಗೆ ಆಯ್ಕೆಯಾದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ಜ.25 ರೊಳಗಾಗಿ ರಾಜ್ಯದ ಆಯಾ ತಾಲೂಕಿನ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಸಮ್ಮೇಳನದಲ್ಲಿ ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೊಟ್ಟೂರು ಪೀಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮತ್ತಿತರ ಮಠಾಧೀಶರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಗಣ್ಯರು ಹಾಗೂ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ, ಯುವ ಘಟಕದ ಅಧ್ಯಕ್ಷ ಸಂಗನಗೌಡ ಯಂಕಂಚಿ, ಪ್ರಭುಗೌಡ ಬೆಳ್ಳಿ, ಸಿದ್ದನಗೌಡ ಪಾಟೀಲ, ಶೇಖರಗೌಡ ಬಿರಾದಾರ, ದೇವೇಂದ್ರ ಗೋನಾಳ ಮತ್ತಿತರರಿದ್ದರು.