ರಾಮಾಂದೋಲನಕ್ಕೆ ಕಹಳೆ

<< ಜನರ ಬಳಿಗೆ ಭಕ್ತರ ನಡಿಗೆ | ಮಂದಿರ ಕಟ್ಟಲು ಕೇಂದ್ರಕ್ಕೆ ಡಿ.6ರ ಗಡುವು >>

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕೆಂಬ ಆಗ್ರಹ ಈಗ ದೇಶಾದ್ಯಂತ ಪ್ರತಿಧ್ವನಿಸಲಾರಂಭಿಸಿದೆ. ರಾಮಭಕ್ತರು ಮಂದಿರ ನಿರ್ವಿುಸಿಯೇ ಸಿದ್ಧ ಎಂಬ ಸಂಕಲ್ಪದೊಂದಿಗೆ ರಾಮಾಂದೋಲನಕ್ಕೆ ಕಹಳೆ ಮೊಳಗಿಸಿದ್ದಾರೆ. ಮಂದಿರ ನಿರ್ವಿುಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಕೇಂದ್ರಕ್ಕೆ ಡಿ.6ರ ಗಡುವು ವಿಧಿಸಿರುವ ಸಂತರು, ದೆಹಲಿ, ಅಯೋಧ್ಯೆ, ಬೆಂಗಳೂರು ಮತ್ತು ನಾಗ್ಪುರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ದೇಶದ 3000ಕ್ಕೂ ಅಧಿಕ ಸಂತರು ಭಾಗವಹಿಸಿರುವ ಮೂರು ದಿನಗಳ ಧರ್ವದೇಶ ಸಭೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾನುವಾರ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ‘ನಮ್ಮ ಜನರೇ ಅನ್ಯರಂತೆ ನಡೆದುಕೊಂಡಾಗ ಆಶ್ಚರ್ಯವಾಗುತ್ತದೆ. ಸಮುದಾಯದ ಸಹನೆಯ ಕಟ್ಟೆ ಒಡೆಯುವುದರೊಳಗೆ ರಾಮ ಮಂದಿರ ನಿರ್ಮಾಣ ಬಿಕ್ಕಟ್ಟು ಬಗೆಹರಿದರೆ ಒಳ್ಳೆಯದು’ ಎಂಬ ನೇರ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು.

ಕೇಂದ್ರಕ್ಕೆ ತರಾಟೆ: ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸ್ಪಷ್ಟ ನಿಲುವು ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಜಗದ್ಗುರು ರಾಮಭದ್ರಾಚಾರ್ಯ ತರಾಟೆಗೆ ತೆಗೆದುಕೊಂಡರು. ‘ತ್ರಿವಳಿ ತಲಾಕ್ ರದ್ದುಗೊಳಿಸಲು ಸುಗ್ರೀವಾಜ್ಞೆಗೆ ಮುಂದಾದ ಸರ್ಕಾರ ರಾಮ ಮಂದಿರ ವಿಚಾರದಲ್ಲಿ ಏಕೆ ಸುಗ್ರೀವಾಜ್ಞೆ ತರುತ್ತಿಲ್ಲ’ ಎಂದು ಪ್ರಶ್ನಿಸಿದರು.

ನಾಲ್ಕು ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಒಮ್ಮೆಯೂ ಅಯೋಧ್ಯೆಗೆ ಭೇಟಿ ಕೊಟ್ಟಿಲ್ಲ. ಭೇಟಿ ನೀಡಿದ್ದರೆ ನಮಗೆ ಸಮಾಧಾನವಿರುತ್ತಿತ್ತು. ಈಗ ನಮ್ಮ ತಾಳ್ಮೆ ಮುಗಿಯುತ್ತಿದೆ ಎಂದು ಅವರು ಗುಡುಗಿದರು.

ಮಂದಿರಕ್ಕಾಗಿ ದೀಪ ಹಚ್ಚಿ

‘ನಿಮ್ಮ ಆಸೆ ಈಡೇರಬೇಕಾದರೆ, ದೀಪಾವಳಿಯಂದು ಶ್ರೀರಾಮನ ಹೆಸರಲ್ಲಿ ಒಂದು ದೀಪ ಹಚ್ಚಿ. ಶೀಘ್ರವೇ ಕನಸು ನನಸಾಗಲಿದೆ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಮಭಕ್ತರಿಗೆ ಕರೆ ಕೊಟ್ಟಿದ್ದಾರೆ. ಅವರ ಹೇಳಿಕೆ ವರ್ಷಾಂತ್ಯಕ್ಕೆ ರಾಮ ಮಂದಿರ ಕಾರ್ಯ ಆರಂಭಗೊಳ್ಳುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ. ‘ನಮಗೆ ನೈಜ ಬದ್ಧತೆ ಹಾಗೂ ಭಕ್ತಿ ಇದ್ದಲ್ಲಿ ರಾಮ ಮಂದಿರ ನಿರ್ಮಾಣ ಕನಸು ಸಾಕಾರಗೊಳ್ಳಲಿದೆ. ದೀಪಾವಳಿಯಿಂದ ನಾವು ಈ ಯೋಜನೆ ಚುರುಕುಗೊಳಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

ಹ್ಯಾಷ್​ಟ್ಯಾಗ್ ವೈರಲ್

ಸಾಮಾಜಿಕ ಜಾಲತಾಣದಲ್ಲಿ ‘ಜಲಾವೊ ಏಕ್ ದಿಯಾ ರಾಮ ಮಂದಿರ ಕೇ ನಾಮ್ ಕಾ’ ಎಂಬ ಹ್ಯಾಷ್​ಟ್ಯಾಗ್ ವೈರಲ್ ಆಗುತ್ತಿದ್ದು, ಇದು ಯಾತ್ರಿಕರು ಮತ್ತು ರಾಮಭಕ್ತರ ವಿಶ್ವಾಸದ ಪ್ರತೀಕ ಎಂದು ಕೇಂದ್ರ ಸಚಿವ ವಿಜಯ್ ಗೋಯೆಲ್ ಸಮರ್ಥನೆ ನೀಡಿದ್ದಾರೆ.

1992ರ ಮೊದಲು ಆದಂತೆಯೇ ರಾಮ ಮಂದಿರ ವಿಚಾರದಲ್ಲಿ ನ್ಯಾಯಾಂಗದಿಂದ ವಿಳಂಬ ಧೋರಣೆ ಮುಂದುವರಿಯುತ್ತಿರುವುದು ದುರದೃಷ್ಟಕರ. ಆರ್​ಎಸ್​ಎಸ್ ರಾಮ ಮಂದಿರ ಬೆಂಬಲಿಗರ ಮನದಾಳವನ್ನು ಅಭಿವ್ಯಕ್ತಿಗೊಳಿಸುತ್ತಿದೆ.

| ರಾಮ್ ಮಾಧವ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

 

ಸುಪ್ರೀಂಕೋರ್ಟ್ ಆದೇಶ, ಸಾಂವಿಧಾನಿಕ ಕಾನೂನು ಅಥವಾ ಯಾವುದೇ ರೀತಿಯ ಚರ್ಚೆ, ಸಂಧಾನವಾದರೂ ಸರಿ, ಒಟ್ಟಿನಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಜನರ ಬಯಕೆ.

| ವಿಜಯ್ ಗೋಯೆಲ್, ಕೇಂದ್ರ ಸಚಿವ

 

ಸುಪ್ರೀಂಕೋರ್ಟ್ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕಿದೆ. ನಾನು ಸರ್ಕಾರದ ಬಗ್ಗೆ ಮಾತನಾಡಲ್ಲ, ಆದರೆ ವೈಯಕ್ತಿಕ ಅಭಿಪ್ರಾಯದಲ್ಲಿ ಒಂದು ವೇಳೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದ್ದರೆ, ಕಾನೂನು ರಚನೆ ಮಾಡಬಹುದು.

| ಪಿ.ಪಿ. ಚೌಧರಿ, ಕಾನೂನು ಖಾತೆ ರಾಜ್ಯ ಸಚಿವ

 

ರಾಮ ಮಂದಿರ ವಿಚಾರವಾಗಿ ನಮಗೆ ಎಲ್ಲ ಪಕ್ಷಗಳ ಬೆಂಬಲ ಬೇಕು. ನಮ್ಮ ಜತೆ ಬಂದು ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲು ರಾಹುಲ್ ಗಾಂಧಿಗೆ ಆಹ್ವಾನಿಸುವೆ. ಇದರಿಂದಲಾದರೂ ಈ ಹಿಂದೆ ಮಂದಿರ ನಿರ್ವಣಕ್ಕೆ ಅಡ್ಡಿ ಮಾಡಿದ್ದ ಕಾಂಗ್ರೆಸ್​ನ ಪಾಪಗಳು ಪರಿಹಾರವಾಗುತ್ತದೆ.

| ಉಮಾಭಾರತಿ, ಕೇಂದ್ರ ಸಚಿವೆ

 

ಪಕ್ಷಾತೀತ ಬೆಂಬಲ

ರಾಮಮಂದಿರ ನಿರ್ಮಾಣಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗುತ್ತಿದೆ. ರಾಮಮಂದಿರ ನಿರ್ಮಾಣ ಆಗಬೇಕೆಂದು ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಕೂಡ ಹೇಳಿದ್ದರು. ಇದೀಗ ಅದೇ ಪಕ್ಷದ ಹಿರಿಯ ನಾಯಕ ಅಜಂಖಾನ್ ಕೂಡ ರಾಮನ ಪ್ರತಿಮೆ ನಿರ್ವಣಕ್ಕೆ ಬೆಂಬಲ ಸೂಚಿಸಿದ್ದಾರೆ. ‘ಪಟೇಲ್ ಪ್ರತಿಮೆಗಿಂತ ರಾಮನ ಪ್ರತಿಮೆ ದೊಡ್ಡದಾಗಿರಲಿ. 182 ಮೀ. ಪಟೇಲ್ ಪ್ರತಿಮೆ ನಿರ್ಮಾಣ ಸಂದರ್ಭದಲ್ಲಿಯೇ ಬಿಜೆಪಿಗೆ ರಾಮನ ಪ್ರತಿಮೆ ಆಲೋಚನೆ ಯಾಕೆ ಬರಲಿಲ್ಲ? ಆ ಆಲೋಚನೆ ಇದ್ದಿದ್ದರೆ, ಈಗ ರಾಮನ ಪ್ರತಿಮೆಯನ್ನು 150 ಮೀ. ಎತ್ತರದಲ್ಲಿ ಮಾತ್ರ ನಿರ್ವಿುಸುವುದು ಏಕೆ?’ ಎಂದು ಪ್ರಶ್ನಿಸಿದ್ದಾರೆ.

ಸಭೆ ನಿರ್ಣಯ

  • ರಾಮ ಮಂದಿರ ನಿರ್ವಣದ ಬಗ್ಗೆ ಸರ್ಕಾರದಿಂದ ಡಿ. 6ರೊಳಗೆ ನಿರ್ಣಾಯಕ ನಿರ್ಧಾರ ಹೊರಬೀಳಬೇಕು
  • ಸಂಧಾನ, ಮಾತುಕತೆ ಅಥವಾ ಯಾವುದರ ಮೂಲಕ ಆದರೂ ಸರಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಲೇಬೇಕು.
  • ಅದು ಸಾಧ್ಯವಾಗದೆ ಇದ್ದಲ್ಲಿ ಸುಗ್ರೀವಾಜ್ಞೆ ತಂದಾದರೂ ಮಂದಿರ ಕನಸನ್ನು ನನಸು ಮಾಡಬೇಕು.

ಐದು ಲಕ್ಷ ಭಕ್ತರ ಬಲಪ್ರದರ್ಶನ

ರಾಮಮಂದಿರ ನಿರ್ಮಾಣ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಡಿ. 9ರಂದು ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸಲು ಸಂತರ ಸಭೆ ನಿರ್ಧರಿಸಿದೆ. ಸಮಾವೇಶದಲ್ಲಿ ಸಂತರು, ರಾಮಭಕ್ತರು, ಮಂದಿರ ನಿರ್ಮಾಣ ಬೆಂಬಲಿಗರು ಸೇರಿ ಒಟ್ಟು 5 ಲಕ್ಷ ಮಂದಿ ಭಾಗವಹಿಸುವ ಅಂದಾಜಿದೆ. ಮುಂದಿನ ದಿನಗಳಲ್ಲಿ ಅಯೋಧ್ಯೆ, ನಾಗ್ಪುರ ಹಾಗೂ ಬೆಂಗಳೂರಿನಲ್ಲೂ ಸಮಾವೇಶ ಹಮ್ಮಿಕೊಳ್ಳಲು ರ್ಚಚಿಸಲಾಗಿದೆ.

ಸುಗ್ರೀವಾಜ್ಞೆಗಾಗಿ ಸಂತರು, ರಾಮಭಕ್ತರು, ಹಿಂದು ಸಮುದಾಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸರ್ಕಾರ ಇರದಿದ್ದರೂ ಪರವಾಗಿಲ್ಲ, ರಾಮಮಂದಿರ ಇರಲೇಬೇಕು. ಡಿ. 6ರೊಳಗೆ ಸರ್ಕಾರ ಪರಿಹಾರ ಕಂಡುಕೊಳ್ಳದಿದ್ದಲ್ಲಿ ನಮ್ಮ ತಾಳ್ಮೆಯ ಕಟ್ಟೆ ಒಡೆಯಲಿದೆ.

| ಜಗದ್ಗುರು ರಾಮಭದ್ರಾಚಾರ್ಯ, ಸಂತ ಸಮಿತಿ ಪ್ರಮುಖರು

 

ನಮಗೆ ಶಬರಿಮಲೆ, ರಾಮ ಮಂದಿರ ಪ್ರಮುಖವಾಗಿವೆ. ಆದರೆ ಸುಪ್ರೀಂಕೋರ್ಟ್ ನಮ್ಮ ದೇಶದ ಘನತೆ ಎಂಬುದನ್ನು ಮರೆಯುವಂತಿಲ್ಲ. ದೇಶದಲ್ಲಿ ಸಮಸ್ಯೆ ಎದುರಾದಾಗ ಹಿಂದಿನಿಂದಲೂ ಸಂತರು ನೆರವು ನೀಡುತ್ತಿದ್ದಾರೆ, ರಾಮ ಮಂದಿರಕ್ಕಾಗಿ ಪ್ರಾರ್ಥನೆ ನಡೆಯಬೇಕು. ಸಂಧಾನ ಸಭೆಗಳ ಮೂಲಕ ಒಮ್ಮತದ ನಿರ್ಣಯದಿಂದ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ.

| ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

 

ಭಾರತೀಯರ ರಾಷ್ಟ್ರಭಕ್ತಿ, ಗೌರವ, ಸ್ವಾಭಿಮಾನ, ಶ್ರದ್ಧಾ ಭಕ್ತಿಯ ಪ್ರತೀಕವಾಗಿರುವ ಆಯೋಧ್ಯಾ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಬೇಕು. ಅದಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಬಿಜೆಪಿಯವರಷ್ಟೇ ರಾಮಭಕ್ತರಲ್ಲ, ಕಾಂಗ್ರೆಸ್, ಜೆಡಿಎಸ್ ಹಾಗೂ ದೇಶದ ಎಲ್ಲ ಪಕ್ಷಗಳಲ್ಲೂ ರಾಮನ ಭಕ್ತರಿದ್ದಾರೆ.

| ಎಸ್.ಎಲ್. ಘೊಟ್ನೇಕರ, ಕಾಂಗ್ರೆಸ್ ಎಂಎಲ್​ಸಿ