ಬಿರುಸು ಪಡೆದ ರಸ್ತೆ ಕೆಲಸ

ಗಂಗಾಧರ ಕಲ್ಲಪಳ್ಳಿ ಸುಳ್ಯ

ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯ-ಅಜ್ಜ್ಜಾವರ ರಸ್ತೆ ಅಭಿವೃದ್ಧಿ ಬಿರುಸಿನಿಂದ ನಡೆಯುತ್ತಿದೆ. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿದ್ದು ಕಳೆದ ತಿಂಗಳು ಆರಂಭಗೊಂಡ ಕಾಮಗಾರಿ ಈಗ ಬಿರುಸು ಪಡೆದಿದೆ. ಕೇಂದ್ರ ರಸ್ತೆ ನಿಧಿಯಿಂದ ಎಂಟು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ಕಾಂತಮಂಗಲ-ಅಜ್ಜಾವರ ರಸ್ತೆಯಲ್ಲಿ ಆರು ಕಿ.ಮೀ. ರಸ್ತೆ ಮತ್ತು ಸುಳ್ಯ-ಉಬರಡ್ಕ ರಸ್ತೆಯಲ್ಲಿ 2.1 ಕಿ.ಮೀ ರಸ್ತೆ ಅಭಿವೃದ್ಧಿ ನಡೆಯಲಿದೆ.

ಅಜ್ಜಾವರ ರಸ್ತೆ ಮರು ನಿರ್ಮಾಣ: ಸುಳ್ಯ-ಅಜ್ಜಾವರ ರಸ್ತೆಯಲ್ಲಿ ಕಾಂತಮಂಗಲದಿಂದ ಅಜ್ಜಾವರದ ಅಡ್ಪಂಗಾಯವರೆಗೆ ಆರು ಕಿ.ಮೀ ರಸ್ತೆ ಅಭಿವೃದ್ಧಿಗೆ ಬಾಕಿಯಾಗಿದ್ದು, ಸಂಪೂರ್ಣ ಹದಗೆಟ್ಟಿತ್ತು. ಅಗಲ ಕಿರಿದು ಮತ್ತು ಹೊಂಡ ಬಿದ್ದಿರುವ ರಸ್ತೆಯಲ್ಲಿ ಪೂರ್ಣವಾಗಿ ಮರು ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈಗ ರಸ್ತೆ ವಿಸ್ತರಣೆ ಮತ್ತು ಮೋರಿಗಳ ನಿರ್ಮಾಣ ಪ್ರಗತಿಯಲ್ಲಿದೆ. ಡಾಂಬರು ಅಳವಡಿಕೆಗೆ ಜಲ್ಲಿ, ಕಲ್ಲುಗಳು ಸಂಗ್ರಹಿಸಲಾಗಿದೆ.

ರಸ್ತೆಯನ್ನು ಒಟ್ಟು ಒಂಬತ್ತು ಮೀಟರ್ ಅಗಲ ಮಾಡಲಾಗುತ್ತಿದ್ದು ಅದರಲ್ಲಿ 5.5 ಮೀ. ಡಾಂಬರು ಹಾಕಿ ಮಧ್ಯಮ ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ವಿಸ್ತರಣೆ ಮಾಡುವುದರ ಜೊತೆಗೆ ರಸ್ತೆಯ ಉಬ್ಬು ತಗ್ಗು ಸರಿಪಡಿಸಿ ಸಮಾನಾಂತರವಾಗಿ ರಸ್ತೆ ಕೆಲಸ ನಡೆಯುತ್ತಿದೆ. ಅಗತ್ಯವಿದಲ್ಲಿ ಮೋರಿ ನಿರ್ಮಾಣ ಮಾಡಲಾಗಿದ್ದು 22 ಮೋರಿಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟು 315 ಮೀಟರ್ ಕಾಂಕ್ರೀಟ್ ಚರಂಡಿ ಆಯ್ದ ಕಡೆ ಮಾಡಲಾಗುವುದು ಎಂದು ಕಾಮಗಾರಿ ನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ. ಈಗ ರಸ್ತೆ ವಿಸ್ತರಣೆ ಮಾಡಿ ಜಲ್ಲಿ ಹಾಸುವುದರ ಜೊತೆಗೆ ಈ ಬಾರಿ ಕನಿಷ್ಠ ಎರಡು ಕಿ.ಮೀ ರಸ್ತೆಯ ಡಾಂಬರು ಕಾಮಗಾರಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಬರಡ್ಕ 2.1 ಕಿ.ಮೀ ರಸ್ತೆ ಅಭಿವೃದ್ಧಿ: ಸಿಆರ್‌ಎಫ್ ಯೋಜನೆಯಲ್ಲಿ ಸುಳ್ಯ-ಉಬರಡ್ಕ ರಸ್ತೆಯಲ್ಲಿ 2.1 ಕಿ.ಮೀ ರಸ್ತೆ ಡಾಂಬರು ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗುವುದು. ಅಗಲ ಕಿರಿದಾಗಿರುವ ಏಕಪಥ ರಸ್ತೆಯನ್ನು ವಿಸ್ತರಣೆ ಮಾಡಿ 5.5 ಮೀಟರ್ ಡಾಂಬರು ಕಾಮಗಾರಿ ಮಾಡಿ ಮಧ್ಯಮ ಪಥ ರಸ್ತೆಯಾಗಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ಆರು ಕಡೆ ಮೋರಿ ನಿರ್ಮಿಸಲಾಗುವುದು.

ಆರೂವರೆ ಕಿ.ಮೀ ದಶಕದ ಯಾತನೆಗೆ ಮುಕ್ತಿ ?: ಸುಳ್ಯ -ಅಜ್ಜಾವರ ಮಧ್ಯೆಯ ಆರೂವರೆ ಕಿ.ಮೀ ರಸ್ತೆ ಅಭಿವೃದ್ಧಿ ಆದರೆ ಸುಳ್ಯ, ಮಂಡೆಕೋಲು ಗ್ರಾಮಸ್ಥರ ಮತ್ತು ಅಂತಾರಾಜ್ಯ ರಸ್ತೆಯ ಪ್ರಯಾಣಿಕರ ದಶಕಗಳ ಯಾತನೆಗೆ ಮುಕ್ತಿ ದೊರೆಯಲಿದೆ. ಕಾಂತಮಂಗಲ ವೃತ್ತದಿಂದ ಅಡ್ಪಂಗಾಯದವರೆಗೆ ಒಟ್ಟು ಏಳೂವರೆ ಕಿ.ಮೀ. ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಆರೂವರೆ ಕಿ.ಮೀ ಸಂಪೂರ್ಣ ಹದಗೆಟ್ಟಿದ್ದು, ದಶಕಗಳಿಂದ ಪ್ರಯಾಣ ದುಸ್ತರವಾಗಿದೆ. ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯದಿಂದ ಮಂಡೆಕೋಲು ಗಡಿವರೆಗೆ ಕರ್ನಾಟಕದ ಭಾಗ ಒಟ್ಟು 14 ಕಿ.ಮೀ. ರಸ್ತೆ ಇದೆ. ಇದರಲ್ಲಿ ಅಡ್ಪಂಗಾಯದಿಂದ ಮಂಡೆಕೋಲು ಪೇಟೆವರೆಗೆ ಮೂರು ಕಿ.ಮೀ. ಲೋಕೋಪಯೋಗಿ ರಸ್ತೆ ಹೊರತುಪಡಿಸಿದರೆ ಉಳಿದ 11 ಕಿ.ಮೀ ಜಿಲ್ಲಾ ಪಂಚಾಯಿತಿ ರಸ್ತೆ ಇದೆ. ಇದರಲ್ಲಿ ನಾಲ್ಕು ಕೋಟಿ ರೂ. ಅನುದಾನದಲ್ಲಿ ನಾಲ್ಕೂವರೆ ಕಿ.ಮೀ. ಕೆಲವು ವರ್ಷಗಳ ಹಿಂದೆ ಅಭಿವೃದ್ದಿಗೊಂಡಿದೆ. ಕಾಂಗಮಂಗಲ ಮತ್ತು ಅಜ್ಜಾವರಗಳಲ್ಲಿ ಒಂದು ಕಿ.ಮೀ ಕಾಂಕ್ರೀಟ್ ಮತ್ತು ಮಂಡೆಕೋಲು ಪೇಟೆಯಿಂದ ಗಡಿಯವರೆಗೆ 3.5 ಕಿ.ಮೀ ಡಾಂಬರು ಕಾಮಗಾರಿ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಉಳಿದ ಆರೂವರೆ ಕಿ.ಮೀ. ರಸ್ತೆ ಡಾಂಬರು ಕಾಣದೆ ಒಂದೂವರೆ ದಶಕಗಳೇ ಕಳೆದಿದೆ. ಕಳೆದ ಐದು ವರ್ಷದಿಂದ ಪ್ಯಾಚ್ ವರ್ಕ್ ಕೂಡ ನಡೆದಿರಲಿಲ್ಲ.

ಈ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ ಅನುದಾನ ಮೂರು ವರ್ಷದ ಹಿಂದೆಯೇ ಮಂಜೂರುಗೊಂಡಿತ್ತು. ಆದರೆ ಈ ಅನುದಾನದ ಟೆಂಡರ್ ಪ್ರಕ್ರಿಯೆ ನಡೆಯಲು ವಿಳಂಬವಾಗಿ ಹಲವು ರಾಜಕೀಯ ವಿವಾದಗಳಿಗೆ ಕಾರಣವಾಗಿತ್ತು. ಇದೀಗ ರಸ್ತೆ ಕಾಮಗಾರಿ ಆರಂಭವಾಗಿರುವುದರಿಂದ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಬ್ರೇಕ್ ಬಿದ್ದಿದೆ.