ಹಣ್ಣೆ ಮಠದ ಶ್ರೀ ಶಿವಾನಾಂದ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಅಜ್ಜಂಪುರ: ಶ್ರೀಶೈಲ ಪೀಠದ ಶಾಖಾ ಮಠ, ತರೀಕೆರೆ ತಾಲೂಕು ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ (64) ಬುಧವಾರ ಲಿಂಗೈಕ್ಯರಾಗಿದ್ದಾರೆ.

ಶ್ರೀಗಳ ಪಾರ್ಥಿವ ಶರೀರ ಬುಧವಾರ ಸಂಜೆ ಮಠಕ್ಕೆ ಆಗಮಿಸಿದ್ದು, ಗುರುವಾರ ಮಠದ ಆವರಣದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳಿಗೆ ಹೃದಯಾಘಾತದ ಹಿನ್ನೆಲೆಯಲ್ಲಿ ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

8-4- 1988ರಲ್ಲಿ ಹಣ್ಣೆ ಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀಗಳು ಧಾರ್ವಿುಕ ಕಾರ್ಯಗಳಿಗೆ ಸೀಮಿತವಾಗದೆ ಸಮಾಜದ ಸ್ವಾಸ್ಥ್ಯ ರಕ್ಷಣೆ ಚಟವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ರೈತರ ಹಿತ ಮತ್ತು ಕನ್ನಡ ನಾಡು ನುಡಿ, ನೆಲ ಜಲ ರಕ್ಷಣೆ ಹೋರಾಟಗಳಿಗೆ ಸ್ಪಂದಿಸುತ್ತಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಸುರಂಗ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡು ರೈತರ ಬೆಂಬಲಕ್ಕೆ ನಿಂತಿದ್ದರು.

ತರೀಕೆರೆ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಭಾಷೆ ಮೇಲೆ ಹಿಡಿತ ಮತ್ತು ಅಪಾರ ಜ್ಞಾನ ಹೊಂದಿದ್ದ ಶ್ರೀಗಳು ಲಿಂಗದೀಕ್ಷೆ, ಮಡಿವಾಳ ಮಾಚಿದೇವ, ಗಂಗೆಯ ತಡಿಯಲ್ಲಿ, ಅಮೃತಬಿಂದು, ನಾ ಕಂಡ ದಕ್ಷಿಣ ಭಾರತ, ತಮಸೋಮ, ಕರಾಣಾಳು ಬಾ ಬೆಳಕೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

1981ರಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಏಷ್ಯಾ ಖಂಡದ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲಿ ಪಾಲ್ಗೊಂಡು ನೂರಾರು ಸಂತರ ಯತಿಗಳ ದಾರ್ಶನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಕೇವಲ ಧರ್ಮ ಪ್ರಚಾರಕ್ಕೆ ಸೀಮಿತವಾಗದೆ ಸಮಾಜ ಸೇವೆ, ಪರಿಸರ ಆರೋಗ್ಯ, ದುಶ್ಚಟ ನಿರ್ಮೂಲನೆಯಂತಹ ಸಾಮಾಜಿಕ ಕಾಳಜಿಯನ್ನು ಹೊಂದಿದ್ದರು.

Leave a Reply

Your email address will not be published. Required fields are marked *