ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂಪುಟಕ್ಕೆ ಸೇರಿದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ಎನ್ಸಿಪಿಯ ಅಜಿತ್ ಪವಾರ್ ಅವರಿಗೆ ಹಣಕಾಸು ಖಾತೆ, ಅನಿಲ್ ದೇಶ್ಮುಖ್ ಅವರಿಗೆ ಗೃಹ, ಶಿವಸೇನೆಯ ಆದಿತ್ಯ ಠಾಕ್ರೆಗೆ ಪ್ರವಾಸೋದ್ಯಮ ಮತ್ತು ಪರಿಸರ ಹಾಗೂ ಕಾಂಗ್ರೆಸ್ ಶಾಸಕ ಬಾಳಾಸಾಹೇಬ್ ಥೋರತ್ ಅವರಿಗೆ ಕಂದಾಯ ಖಾತೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವ ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟದ ನೂತನ ಮಂತ್ರಿಗಳಿಗೆ ಹಂಚಿಕೆ ಮಾಡಿದ ಖಾತೆಯ ಪಟ್ಟಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅಂಕಿತ ಹಾಕಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಬಳಿ ಸಾಮಾನ್ಯ ಆಡಳಿತ, ಮಾಹಿತಿ ಮತ್ತು ತಂತ್ರಜ್ಞಾನ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಕಾನೂನು ಮತ್ತು ನ್ಯಾಯಾಂಗ ಹಾಗೂ ಹಂಚಿಕೆಯಾಗದ ಖಾತೆಗಳನ್ನು ಇಟ್ಟುಕೊಂಡಿದ್ದಾರೆ.
ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಶಿವಸೇನೆ 14, ಎನ್ಸಿಪಿ 16 ಹಾಗೂ ಕಾಂಗ್ರೆಸ್ 10 ಖಾತೆಗಳನ್ನು ಹೊಂದಿವೆ. ಎನ್ಸಿಪಿ ಶಾಸಕರಿಗೆ ಪ್ರಬಲವಾದ ಖಾತೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯಂಥ ಪ್ರಮುಖ ಖಾತೆಗಳು ದೊರೆತಿವೆ. ಮುಖ್ಯಮಂತ್ರಿ ಪಟ್ಟ ಹೊಂದಿರುವ ಶಿವಸೇನೆಗೆ ಕೃಷಿ, ನಗರಾಭಿವೃದ್ಧಿ, ಕೈಗಾರಿಕೆ ಖಾತೆಗಳನ್ನು ಪಡೆದಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟ 43 ಸಚಿವರನ್ನು ಹೊಂದಿದೆ.
ಅಜಿತ್ ಪವಾರ್ ಅವರು ನೀರಾವರಿ ಹಗರಣದ ಪ್ರಕರಣ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಗಿರಿ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ ಪಕ್ಷದ ಹಿರಿಯ ನಾಯಕರು ಪ್ರಕರಣ ಇನ್ನು ವಿಚಾರಣೆಯಲ್ಲಿದೆ. ಸಚಿವರಾದರೆ ಸಮಸ್ಯೆ ಎದುರಾಗುವುದಿಲ್ಲ. ಅಂತಿಮ ತೀರ್ಪು ಬಂದ ನಂತರ ಮುಂದಿನ ನಡೆ ನಿರ್ಧರಿಸಬಹುದು ಎಂದು ಮನವೊಲಿಸಿ ಅವರಿಗೆ ಮಂತ್ರಿ ಪದವಿ ಒಪ್ಪಿಕೊಳ್ಳಲು ಒಪ್ಪಿಸಿದರು ಎಂದು ತಿಳಿದು ಬಂದಿದೆ. (ಏಜೆನ್ಸೀಸ್)