ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಅಜಯ್​ ಮಕೇನ್​ ರಾಜೀನಾಮೆ: ರಾಷ್ಟ್ರ ಮಟ್ಟದ ಹುದ್ದೆ ಸಾಧ್ಯತೆ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಾಕೇನ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ರಾಜೀನಾಮೆ ಅಂಗಿಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

54 ವರ್ಷದ ಅಜಯ್​ ಮಕೇನ್​ ಕಳೆದ ನಾಲ್ಕು ವರ್ಷದಿಂದ ದೆಹಲಿಯ ಕಾಂಗ್ರೆಸ್​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜೀನಾಮೆ ಸಲ್ಲಿಸುವಾಗ ಅನಾರೋಗ್ಯದ ಕಾರಣ ನೀಡಿದ್ದರು ಎನ್ನಲಾಗಿದೆ. ಆದರೆ ಇನ್ನೂ ಕೆಲ ಮೂಲಗಳ ಪ್ರಕಾರ, ಅಜಯ್ ಮಕೇನ್​ ಅವರಿಗೆ ರಾಷ್ಟ್ರ ಮಟ್ಟದ ಹುದ್ದೆ ಅಥವಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಿರುವುದರಿಂದ ದೆಹಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಮಕೇನ್ ಟ್ವೀಟ್​ನಲ್ಲಿ ರಾಜೀನಾಮೆ ಘೋಷಿಸುವ ಮೊದಲು ಗುರುವಾರ ರಾತ್ರಿ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ನಂತರ ಮಾಡಿರುವ ಟ್ವೀಟ್​ನಲ್ಲಿ, “2015ರ ಲೋಕಸಭೆ ಚುನಾವಣೆ ನಂತರ ಅಂದರೆ ನಾಲ್ಕು ವರ್ಷಗಳ ಹಿಂದೆ ದೆಹಲಿ ಕಾಂಗ್ರೆಸ್​ ಅಧ್ಯಕ್ಷನಾಗಿದ್ದಾಗ ರಾಹುಲ್​ ಗಾಂಧಿ, ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಮಾಧ್ಯಮದಿಂದ ಪ್ರೀತಿ ಮತ್ತು ಉತ್ತಮ ಬೆಂಬಲ ದೊರೆತಿದೆ. ಕಷ್ಟಕರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವುದು ಸುಲಭದ ಮಾತಾಗಿರಲಿಲ್ಲ. ನಾನು ಎಲ್ಲರಿಗೂ ಋಣಿಯಾಗಿದ್ದೇನೆ” ಎಂದಿದ್ದಾರೆ.

ಮೂರು ತಿಂಗಳ ಹಿಂದೆ ಮಕೇನ್​ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದಾಗ ಹಂಗಾಮಿ ಅಧ್ಯಕ್ಷರಾಗಿ ಪಿ.ಸಿ.ಚಾಕೊ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಮಕೇನ್​ ತಾತ್ಕಾಲಿಕವಾಗಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. (ಏಜೆನ್ಸೀಸ್)