ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಡಿ ಎಂದು ನಟ ಅಜಯ್​ ದೇವಗನ್​ಗೆ ಅಭಿಮಾನಿ​ ಹೇಳಿದ್ದೇಕೆ ಗೊತ್ತಾ?

ಜೈಪುರ: ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರಿಗೆ ವಿಶೇಷ ಮನವಿಯೊಂದು ಬಂದಿದ್ದು, ಸಮಾಜದ ಹಿತದೃಷ್ಟಿಯಿಂದ ತಂಬಾಕುಯುಕ್ತ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬೇಡಿ ಎಂದು 40 ವರ್ಷದ ಕ್ಯಾನ್ಸರ್‌ ರೋಗಿಯೊಬ್ಬರು ಮನವಿ ಮಾಡಿದ್ದಾರೆ.

ರಾಜಸ್ಥಾನದ ನಾನಾಕ್ರಮ್‌ ಎಂಬವರು ಅಜಯ್‌ ದೇವಗನ್‌ ಅವರಿಗೆ ತಂಬಾಕುಯುಕ್ತ ಉತ್ಪನ್ನಗಳ ಜಾಹೀರಾತುಗಳನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ರೋಗಿಯ ಕುಟುಂಬಸ್ಥರು ಮಾತನಾಡಿ, ಅಜಯ್‌ ದೇವಗನ್‌ ಅವರ ಅಭಿಮಾನಿಯಾಗಿದ್ದ ಆತ ಅವರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಉತ್ಪನ್ನಗಳನ್ನು ಬಳಸುತ್ತಿದ್ದ. ಆದರೆ, ಅದರಿಂದ ಜೀವಕ್ಕೆ ತೊಂದರೆ ಇದೆ ಎನ್ನುವುದು ಈಗ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಸುಮಾರು 1000 ಕರಪತ್ರಗಳಲ್ಲಿ ಅಜಯ್‌ ದೇವಗನ್‌ ಅವರಿಗೆ ಮನವಿ ಮಾಡಲಾಗಿದ್ದು, ತಂಬಾಕು ಉತ್ಪನ್ನಗಳು ಹೇಗೆ ಆತನನ್ನು ಮತ್ತು ಕುಟುಂಬದವರನ್ನು ಕಾಡಿವೆ ಎಂಬುವ ಕುರಿತು ಬರೆಯಲಾಗಿದೆ. ಸಂಗಾನೇರ್‌, ಜಗತ್‌ಪುರ ಮತ್ತು ನಗರದ ಸಮೀಪದ ಪ್ರದೇಶಗಳಲ್ಲಿ ಹಂಚಿ ಗೋಡೆಗಳಿಗೆ ಅಂಟಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ನನ್ನ ತಂದೆ ನಾನಾಕ್ರಮ್‌ ಮೀನಾ ಅವರು ತಂಬಾಕನ್ನು ಜಿಗಿಯಲು ಶುರು ಮಾಡಿದರು ಮತ್ತು ಜಾಹೀರಾತಿನಲ್ಲಿ ಅಜಯ್‌ ದೇವಗನ್‌ ಕಾಣಿಸಿಕೊಳ್ಳುತ್ತಿದ್ದ ಉತ್ಪನ್ನಗಳನ್ನಷ್ಟೇ ಬಳಸುತ್ತಿದ್ದರು. ಅಜಯ್ ದೇವಗನ್‌ ಅವರಿಂದ ಪ್ರಭಾವಿತರಾಗಿದ್ದ ತಂದೆಯವರು ಕ್ಯಾನ್ಸರ್‌ಗೆ ತುತ್ತಾದ ವೇಳೆ ಈ ರೀತಿಯ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ ಎಂದು ರೋಗಿಯ ಪುತ್ರ ದಿನೇಶ್‌ ಮೀನಾ ಹೇಳಿದ್ದಾರೆ.

ಪಾಂಪ್ಲೆಟ್‌ನಲ್ಲಿ ಮದ್ಯ, ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳು ಹಾನಿಕಾರಕ ಮತ್ತು ಅವುಗಳನ್ನು ಜಾಹೀರಾತಿನ ಮೂಲಕ ಉತ್ತೇಜಿಸಬೇಡಿ ಎಂದು ಮನವಿ ಮಾಡಿದ್ದಾರೆ.

ನಾನಾಕ್ರಮ್‌ಗೆ ಇಬ್ಬರು ಮಕ್ಕಳಿದ್ದು, ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ತಂಬಾಕು ಸೇವನೆಯಿಂದಾಗಿ ಕ್ಯಾನ್ಸರ್‌ಗೆ ತುತ್ತಾದ ಅವರೀಗ ಮಾತನಾಡಲು ಸಾಧ್ಯವಿಲ್ಲ ಮತ್ತು ಸಂಗಾನಗರ ನಗರದಲ್ಲಿ ಹಾಲು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. (ಏಜೆನ್ಸೀಸ್)