ಅಜವಾನದ ನೀರು

ಕೆಲವು ಆಹಾರಪದಾರ್ಥಗಳನ್ನು ಆರೋಗ್ಯದ ಸಲುವಾಗಿ ಬಳಸಬೇಕೆಂದಾಗ ಆ ಆಹಾರಪದಾರ್ಥದಲ್ಲಿನ ಪೋಷಕಾಂಶವು ದೇಹದಲ್ಲಿ ಸರಿಯಾಗಿ ಹೀರಿಕೊಳ್ಳುವಂತೆ ಅವಕಾಶ ಮಾಡಿಕೊಡಬೇಕಾಗುತ್ತದೆ. ರುಚಿಗಾಗಿ ಅಥವಾ ಇನ್ನೊಂದು ಪದಾರ್ಥದ ಫ್ಲೇವರ್ ಹೆಚ್ಚಾಗಬೇಕೆಂದಾಗ ಇದರ ಆವಶ್ಯಕತೆ ಇರುವುದಿಲ್ಲ. ಆದರೆ ಮದ್ದಾಗಿ ಬಳಸುವಾಗ ದೇಹಕ್ಕೆ ಅದರ ಪರಿಣಾಮದ ಆವಶ್ಯಕತೆ ಬೇರೆಯದೇ ಆಗಿರುತ್ತದೆ.

ಅಜವಾನದ ವಿಷಯಕ್ಕೆ ಬಂದರೆ – ಇದರ ನೀರು ದೇಹಕ್ಕೆ ಪೋಷಕಾಂಶಗಳು ಲಭ್ಯವಾಗುವಲ್ಲಿ ಉತ್ತಮ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಎರಡು ಚಮಚ ಓಮಕಾಳನ್ನು (ಅಜವಾನ) ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಗ್ಗೆ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು. ಪ್ರತಿನಿತ್ಯ ಈ ದ್ರಾವಕವನ್ನು ಕುಡಿಯುವುದರಿಂದ ದೀರ್ಘಕಾಲದ ವಾಯುಸಮಸ್ಯೆ ಕಡಿಮೆಯಾಗುತ್ತ ಬರುತ್ತದೆ. ತೂಕವನ್ನು ಕಡಿಮೆ ಮಾಡುವಲ್ಲಿ ಓಮಕಾಳು ನೀರು ಪರಿಣಾಮಕಾರಿ.

ಅಜವಾನದ ನೀರು ಕುಡಿಯುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳೂ ಹತೋಟಿಗೆ ಬರುತ್ತವೆ. ಥೈಮೊಲ್ ಎಂಬ ಅಂಶವು ಅಜವಾನದಲ್ಲಿದ್ದು, ಇದು ಗ್ಯಾಸ್ಟ್ರಿಕ್ ಜ್ಯೂಸ್ ಬಿಡುಗಡೆ ಮಾಡುವಲ್ಲಿ ಸಹಾಯಕಾರಿಯಾಗಿದ್ದು, ತನ್ಮೂಲಕ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಅನುಕೂಲ ಮಾಡಿಕೊಡುತ್ತದೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ತೊಂದರೆಗಳು ಗರ್ಭಿಣಿಯರನ್ನು ಕಾಡುತ್ತವೆ. ಅಂತಹ ಸಂದರ್ಭದಲ್ಲಿ ಓಮಕಾಳನ್ನು ಬಳಸುವುದು ಉತ್ತಮ. ಅಲ್ಲದೆ ಮಗುವಿನ ಜನನದ ನಂತರ ಸಹ ಅಜವಾನ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ. ಯುಟೆರಸ್ ಸ್ವಚ್ಛವಾಗಿರಲು ಸಹಾಯ ಮಾಡುತ್ತದೆ. ಶೀತ, ನೆಗಡಿಯನ್ನು ಕಡಿಮೆ ಮಾಡಲು ಓಮಕಾಳು ನೀರನ್ನು ಬಳಸಿ.

Leave a Reply

Your email address will not be published. Required fields are marked *