ಧಾರವಾಡ: ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ಹಿಂಪಡೆಯಲು ಆಗ್ರಹಿಸಿ ಎಐಯುಟಿಯುಸಿಗೆ ಸೇರಿದ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಕಳೆದ ೨ ವರ್ಷಗಳಿಂದ ನೀಡಿಲ್ಲ. ಈ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು. ಆದರೆ, ಪರಿಗಣಿಸದೆ ಮಂಡಳಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಶಾಲಾ ಖರ್ಚುಗಳು ಏರುಗತಿಯಲ್ಲಿರುವ ಇಂದಿನ ದಿನಗಳಲ್ಲಿ ಮಂಡಳಿಯ ನಿರ್ಧಾರ ಕಾರ್ಮಿಕರ ಹಕ್ಕನ್ನು ಕಿತ್ತುಕೊಂಡಿದೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜೋತೆಪ್ಪನವರ, ಉಪಾಧ್ಯಕ್ಷರಾದ ಅಲ್ಲಾಭಕ್ಷ ಕಿತ್ತೂರ, ಹಸ್ಮಿನ್‌ಖಾನ್, ಸದಸ್ಯರಾದ ಮಹಮ್ಮದ್ ನದಾಫ್, ಸುಲೇಮಾನ್ ಖನಿಕಿ, ಮಹಮ್ಮದ್ ಸಾಽಕ ದರೋಗ, ಮಂಜುನಾಥ ದಾಸನಕೊಪ್ಪ, ರವಿ ಕಿತ್ತೂರ, ವೀರಪ್ಪ ಸಾಮ್ರಾಣಿ, ಮೊಮ್ಮದ್‌ಅಲಿ ರಂಜಾನ್ ಇತರರಿದ್ದರು.