ಹವಾಲಾ ಮ್ಯಾಜಿಕ್ -20 ರೂ.ಕೊಟ್ಟು 20 ಕೋಟಿ ರೂ. ಪಡೆದಿದ್ದ ಐಶ್ವರ್ಯ!

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಸಿಲುಕಿರುವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ಈಗ ಹವಾಲಾ ದಂಧೆ ಉರುಳು ಸುತ್ತಿಕೊಂಡಿದೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರೇ 20 ಕೋಟಿ ರೂ. ಹವಾಲಾ ಹಣ ಸ್ವೀಕರಿಸಲು ಸಿಂಗಾಪುರಕ್ಕೆ ಹೋಗಿದ್ದರು ಎಂಬ ವಿಚಾರ ಇ.ಡಿ. ತನಿಖೆಯಲ್ಲಿ ಬಯಲಾಗಿದೆ. 2 ವರ್ಷಗಳ ಹಿಂದೆ ಐಟಿ ದಾಳಿ ನಡೆಯುವ 1 ವಾರಕ್ಕೂ ಮೊದಲು ಸಿಂಗಾಪುರ ನಾಗರಿಕ, ಹವಾಲಾ ಏಜೆಂಟ್ ರಜನೀಶ್ ಗೋಪಿನಾಥ್ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಸಿಂಗಾಪುರಕ್ಕೆ ತೆರಳಿದ್ದರು. ಶಿವಕುಮಾರ್ ಸೂಚನೆ ಮೇರೆಗೆ ಕೆಫೆ ಕಾಫಿ ಡೇ ಉದ್ಯೋಗಿ ದೀಕ್ಷಿತ್​ಗೆ (ಉದ್ಯಮಿ ಸಿದ್ಧಾರ್ಥ್ ಆಪ್ತ) ಕೋರ್ಡ್ ವರ್ಡ್​ನಂತೆ 20 ರೂ. ನೋಟು ಕೊಟ್ಟು 20 ಕೋಟಿ ರೂ. ಸ್ವೀಕರಿಸಿದ್ದರು. ಆ ಹಣವನ್ನು ಡಿಕೆಶಿ ಸೂಚನೆ ಮೇರೆಗೆ ಮತ್ತೊಂದು ಉದ್ಯಮದಲ್ಲಿ ಐಶ್ವರ್ಯಾ ತೊಡಗಿಸಿ ಭಾರತಕ್ಕೆ ವಾಪಸ್ ಮರಳಿದ್ದರು. ಇದಕ್ಕೆ ರಜನೀಶ್ ಗೋಪಿನಾಥ್ ಮಧ್ಯಸ್ಥಿಕೆ ವಹಿಸಿದ್ದ ಎಂಬ ವಿಚಾರ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿವೆ. ಶಿವಕುಮಾರ್ ಮೇಲೆ ಐಟಿ ದಾಳಿ ವೇಳೆ ಅವರ ಆಪ್ತ ಎನ್.ಚಂದ್ರಶೇಖರ್ ಸುಕಪುರಿ ಮನೆಯನ್ನೂ ಶೋಧಿಸಲಾಗಿತ್ತು. ಈ ವೇಳೆ ಚಂದ್ರಶೇಖರ್ ವಿಚಾರಣೆ ನಡೆಸಿದಾಗ ಹವಾಲಾ ದಂಧೆ ಮಾಹಿತಿ ಲಭ್ಯವಾಗಿತ್ತು. ಈ ಸುಳಿವು ಆಧರಿಸಿ ಗೋಪಿನಾಥನ್​ನನ್ನು ಪ್ರಶ್ನಿಸಿದಾಗ ದಂಧೆ ಬೆಳಕಿಗೆ ಬಂದಿದೆ. ಇದರಲ್ಲಿ ಕೆಫೆ ಕಾಫಿ ಡೇ ಉದ್ಯೋಗಿ, ಉದ್ಯಮಿ ಸಿದ್ಥಾರ್ಥ್ ಆಪ್ತ ದೀಕ್ಷಿತ್, ರವಿ, ಶರ್ಮಾ ಟ್ರಾವೆಲ್ಸ್ ಸಂಸ್ಥೆ ನೌಕರ ಮತ್ತು ಹವಾಲಾ ಏಜೆಂಟ್ ರಫಿ ಕೈವಾಡ ಇರುವುದು ಗೊತ್ತಾಗಿದೆ. ಗೋಪಿನಾಥ್​ನಿಂದ 1.2 ಕೋಟಿ ರೂ. ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಳು ದೊರತಿವೆ. ಗೋಪಿನಾಥ್ ಮೊಬೈಲ್ ಪರಿಶೀಲಿಸಿದಾಗ ಡಿಕೆಶಿ ಜತೆ ಸಂದೇಶಗಳು ವಿನಿಮಯವಾಗಿರುವುದು ಪತ್ತೆಯಾಗಿದೆ. ಚಂದ್ರಶೇಖರ್ ಜತೆ ಗೋಪಿನಾಥ್ ನಿರಂತರ ಸಂಪರ್ಕದಲ್ಲಿರುವುದೂ ತನಿಖೆಯಲ್ಲಿ ದೃಢಪಟ್ಟಿದೆ.

ಖಾತೆಯಿಂದ ಖಾತೆಗೆ ಅಕ್ರಮ ಹಣ ವರ್ಗಾವಣೆ

ನವದೆಹಲಿ: ಬೇರೆ ಬೇರೆ ಹೆಸರಿನಲ್ಲಿರುವ ಡಿ.ಕೆ.ಶಿವಕುಮಾರ್​ಗೆ ಸೇರಿದ 317 ಬ್ಯಾಂಕ್ ಖಾತೆಗಳಿಗೆ ಪರಸ್ಪರ ಸಂಬಂಧವಿದೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ, ಆ ಖಾತೆಯಿಂದ ಮತ್ತಿನ್ನೊಂದು ಖಾತೆಗೆ ಅಕ್ರಮ ಹಣ ವರ್ಗಾವಣೆಯಾಗಿದೆ. ಇವೆಲ್ಲವೂ ಪ್ರಮುಖ ಆರೋಪಿಗೆ ತಿಳಿದೇ ನಡೆದಿದೆ ಮತ್ತು ಅಂತಿಮವಾಗಿ ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡಲು ಬಳಸಿಕೊಳ್ಳಲಾಗಿದೆ ಎಂದು ಇ.ಡಿ. ಪರ ವಾದಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಅಕ್ರಮ ಹಣ ಪತ್ತೆ ಪ್ರಕರಣದ ಕರಾಳ ಜಾಲವನ್ನು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಅಕ್ರಮ ನಗದಿನ ಜತೆಗೆ ಮಹತ್ವದ ದಾಖಲೆಗಳೂ ನಮ್ಮ ಬಳಿ ಇವೆ. 143 ಕೋಟಿ ರೂ. ದಾಖಲೆಯಿಲ್ಲದ ನಗದು ಸಿಕ್ಕಿದೆ. ಈ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಡಿಕೆಶಿ ಪರ ವಕೀಲರು ಹೇಳುವಂತೆ ಈ ಪ್ರಕರಣ ಕೇವಲ 41 ಲಕ್ಷ ರೂ.ಗೆ ಸಂಬಂಧಿಸಿದ್ದಲ್ಲ. ಈ ಪ್ರಮಾಣದ ಹಣ ಎಲ್ಲಿಂದ, ಯಾಕಾಗಿ ಬಂತು ಮತ್ತು ಎಲ್ಲಿ ಹೋಯಿತು ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ವಾದಿಸಿದರು. ಇದನ್ನು ವಿರೋಧಿಸಿ ವಾದಿಸಿದ ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘಿ, ಶಿವಕುಮಾರ್​ರಿಂದ ಕೇವಲ 41 ಲಕ್ಷ ರೂ. ಮಾತ್ರ ರಿಕವರಿ ಮಾಡಲಾಗಿದೆ. ನವದೆಹಲಿಯ ಸಫ್ದರ್​ಜಂಗ್ ಎನ್ ಕ್ಲೇವ್ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಪ್ರಕರಣದ ಇತರ ಆರೋಪಿಗಳಿಗೆ ಸೇರಿದ್ದು. ಇ.ಡಿ. ಹೇಳುವ 20 ಬ್ಯಾಂಕ್ ಖಾತೆಗಳಲ್ಲಿ 10 ವರ್ಷಗಳಲ್ಲಿ 64 ಲಕ್ಷ ರೂ. ವ್ಯವಹಾರ ಮಾತ್ರ ನಡೆದಿದೆ. ಶಿವಕುಮಾರ್ ಹೆಸರಲ್ಲಿ ಕೇವಲ 20 ಖಾತೆಗಳಿದ್ದು, 317 ಖಾತೆಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ. ಡಿಕೆಶಿ ಮಗಳ ಖಾತೆಯಲ್ಲಿ 65,000 ರೂ. ಮಾತ್ರ ಇತ್ತು. ಸೋದರ ಡಿ.ಕೆ.ಸುರೇಶ್ ಖಾತೆಯಲ್ಲಿ ಕಳೆದ 10 ವರ್ಷಗಳಲ್ಲಿ 70 ಲಕ್ಷ ರೂ. ವ್ಯವಹಾರ ನಡೆದಿದೆ. ಅಪ್ಪನ ನಿಧನ ನಂತರ ಅವರ ಆಸ್ತಿ ಮಗನಿಗೆ ಬಂದಿದೆ. ಹೀಗಾಗಿಯೇ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದರು. ಡಿಕೆಶಿ ಪರ ಮತ್ತೋರ್ವ ವಕೀಲ ಮುಕುಲ್ ರೋಹಟ್ಗಿ, ಮಧುಮೇಹ, ರಕ್ತದೊತ್ತಡ ಹಾಗೂ ಥೈರಾಯ್್ಡ ಸಮಸ್ಯೆಯಿಂದ ಬಳಲುತ್ತಿರುವ ಶಿವಕುಮಾರ್​ಗೆ ಅನಾರೋಗ್ಯದ ಮಾನದಂಡದಲ್ಲಿ ಜಾಮೀನು ನೀಡಬೇಕು ಎಂದು ಪ್ರತಿಪಾದಿಸಿದರು.

ದೆಹಲಿ ಹೈಕೋರ್ಟ್​ಗೆ ಮೊರೆ

ಹಣಕಾಸು ಅವ್ಯವಹಾರ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ನನ್ನಿಂದ ಪಡೆದುಕೊಂಡಿರುವ ಹೇಳಿಕೆಗಳ ಮಾಹಿತಿ ಪ್ರತಿಯನ್ನೂ ಹಂಚಿಕೊಳ್ಳಬೇಕು. ಈ ಬಗ್ಗೆ ನೀವು ಇ.ಡಿ.ಗೆ ಆದೇಶಿಸಬೇಕೆಂದು ಡಿಕೆಶಿ ಪರ ವಕೀಲರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *