ಏರ್​ಪೋರ್ಟ್​, ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಇಂಜಿನಿಯರ್​ ಪದವೀಧರ

ಬೆಂಗಳೂರು: ವಿಮಾನ ನಿಲ್ದಾಣ ಹಾಗೂ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಲಿಲ್ಲ ಎಂದು ಹತಾಶೆಗೊಳಗಾದ ಇಂಜಿನಿಯರ್​ ಪದವೀಧರ ಎರಡೂ ಕಡೆಗೆ ಹುಸಿ ಬಾಂಬ್​ ಕರೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಉಡುಪಿ, ಮಣಿಪಾಲ ಮೂಲದ ಆದಿತ್ಯ ರಾವ್​ (34) ಬಂಧಿತ. ಈತ ಬಿಇ, ಎಂಬಿಎ ಪದವಿ ಪಡೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ರೈಲ್ವೆ ಇಲಾಖೆ ಹಾಗೂ ದೇವನಹಳ್ಳಿ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದ. ಆದರೆ ಎರಡೂ ಕಡೆ ಉದ್ಯೋಗ ದೊರೆಯದೆ ಹತಾಶೆಗೆ ಒಳಗಾಗಿದ್ದ.

15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್​ಗೆ ಫೋನ್​ ಮಾಡಿ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ರೈಲ್ವೆ ಸ್ಟೇಶನ್​ ಕೂಡ ಸ್ಫೋಟಿಸುವುದಾಗಿ ಹೇಳಿದ್ದ. ಮತ್ತೆ ಈಗ ಎರಡು ದಿನಗಳ ಹಿಂದೆ ಏರ್ ಪೋರ್ಟ್​ ಪಾರ್ಕಿಂಗ್ ಜಾಗದಲ್ಲಿ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ತನಿಖೆ ನಡೆಸಿದ ಕೆಐಎಲ್ ಪೊಲೀಸರು ಆರೋಪಿ ಆದಿತ್ಯ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.