ವಿಮಾನ ನಿಲ್ದಾಣ ಸಿಬ್ಬಂದಿ ಪ್ರತಿಭಟನೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಸೋಮವಾರ ಆಗಮಿಸಿದ ಎರಡು ಕಂಪನಿ ಪ್ರತಿನಿಧಿಗಳ ವಿರುದ್ಧ ವಿಮಾನ ನಿಲ್ದಾಣ ಸಿಬ್ಬಂದಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಆಸಕ್ತಿ ವಹಿಸಿ ಜಿಎಂಆರ್ ಗ್ರೂಪ್ ಹಾಗೂ ಇಂಡಸ್ ಕಂಪನಿಯ ಒಟ್ಟು ಸುಮಾರು 15 ಜನರ ತಂಡ ಪ್ರತ್ಯೇಕ ಗುಂಪುಗಳಾಗಿ ಅನುಕ್ರಮವಾಗಿ ಬೆಳಗ್ಗೆ ಅಂದಾಜು 10 ಹಾಗೂ 11.15 ಗಂಟೆಗೆ ವಿಮಾನ ನಿಲ್ದಾಣ ಆವರಣಕ್ಕೆ ಆಗಮಿಸಿತು. ಕೂಡಲೇ ಒಟ್ಟು ಸೇರಿದ ಸುಮಾರು 80 ಸಿಬ್ಬಂದಿ ‘ಗೋ ಬ್ಯಾಕ್’ ಎಂದು ಪ್ರತಿಭಟನೆ ನಡೆಸಿ ಕಂಪನಿ ಪ್ರತಿನಿಧಿಗಳನ್ನು ವಾಪಸು ಕಳುಹಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಸಂಘಟನೆ ಮಂಗಳೂರು ಶಾಖೆ ವತಿಯಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ದೈನಂದಿನ ವಿಮಾನ ಸಂಚಾರ ಸೇವೆ ಸಹಜವಾಗಿತ್ತು. ನೌಕರರ ಸಂಘಟನೆ ಮಂಗಳೂರು ಶಾಖೆ ಅಧ್ಯಕ್ಷ ಅರವಿಂದ ಗಾಂವ್ಕರ್, ಕಾರ್ಯದರ್ಶಿ ಶ್ರವಣ್ ಕುಮಾರ್, ಕೋಶಾಧಿಕಾರಿ ಎಂ.ಎ.ಶಕೀಲ್, ಸಂಘಟನಾ ಕಾರ್ಯದರ್ಶಿ ಡಿ.ಸುನಿಲ್ ಕುಮಾರ್ ಉಪಸ್ಥಿತರಿದ್ದರು.