ವಿಮಾನ ನಿಲ್ದಾಣಕ್ಕೆ ಮತ್ತೆ ಭೂಸ್ವಾಧೀನ

ವಿಜಯವಾಣಿ ಸುದ್ದಿಜಾಲ ಅಂಕೋಲಾ

ಸೀಬರ್ಡ್ ನೌಕಾನೆಲೆಗಾಗಿ ಅಲಗೇರಿಯಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಬಂಜರು ಬಿಡಲಾಗಿದೆ. ಈಗ ನಾಗರಿಕ ವಿಮಾನ ನಿಲ್ದಾಣಕ್ಕೆ ಸೀಬರ್ಡ್​ನವರು ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವುದು ನಿರಾಶ್ರಿತರಾದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾವುದೇ ಕಾರಣಕ್ಕೂ ಮತ್ತೆ ನಾವು ನಿರಾಶ್ರಿತರಾಗಲು ಬಿಡುವುದಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ವಿನೋದ ಗಾಂವಕರ ಹೇಳಿದರು.

ಅಲಗೇರಿಯ ಶ್ರೀ ಸಣ್ಣಮ್ಮದೇವಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಸೀಬರ್ಡ್ ನೌಕಾನೆಲೆಗಾಗಿ 1984ರಲ್ಲಿ ಅಲಗೇರಿಯಲ್ಲಿ ಸಾವಿರಾರು ಎಕರೆ ಭೂಮಿ ಭೂಸ್ವಾಧೀನ ಮಾಡಿಕೊಂಡಿದ್ದರಿಂದ ನೂರಾರು ಕುಟುಂಬಗಳು ನಿರಾಶ್ರಿತ ರಾಗುವಂತಾಯಿತು. ಸ್ವಾಧೀನಪಡಿಸಿಕೊಂಡ ಭೂಮಿಯನ್ನೂ ಬಂಜರು ಬಿಡಲಾಗಿದೆ. ಅಲ್ಲಿ ವಿಮಾನ ನಿಲ್ದಾಣ ನಿರ್ವಿುಸಲು ಅವಕಾಶವಿದ್ದರೂ ಸೀಬರ್ಡ್​ನವರು ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವುದು ಯಾವ ನ್ಯಾಯ? ನೌಕಾನೆಲೆ ರಕ್ಷಣೆ ಹೆಸರಲ್ಲಿ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು.

ಪ್ರಮುಖರಾದ ಗಣೇಶ ಚಿನ್ನಾ ನಾಯ್ಕ ಮಾತನಾಡಿ, ಜನರಿಗೆ ಮಾಹಿತಿ ನೀಡದೆ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಸಮೀಕ್ಷೆಗೆ ಆಗಮಿಸಿದರೆ ಮುಂದಾಗುವ ಅನಾಹುತಕ್ಕೆ ಸೀಬರ್ಡ್ ನೌಕಾನೆಲೆಯವರೇ ಜವಾಬ್ದಾರರು. ರಾಜ್ಯ, ಕೇಂದ್ರ ಸರ್ಕಾರಗಳು ಸೇರಿ ಈ ಯೋಜನೆಗೆ ಮುಂದಾಗಿವೆ. ಅಂದು ಗುಂಟೆಗೆ 150 ರೂ. ನೀಡಿದ್ದರು. ಈಗ ಸುಪ್ರೀಂಕೋರ್ಟ್ ಆದೇಶದಂತೆ ಗುಂಟೆಗೆ 11,500 ರೂ. ಮತ್ತು ಬಡ್ಡಿ ಸೇರಿ ಸುಮಾರು 80 ಸಾವಿರ ರೂ. ದಷ್ಟು ಪರಿಹಾರ ಪಡೆದುಕೊಳ್ಳಲು 35 ವರ್ಷ ಹೋರಾಡಬೇಕಾಯಿತು ಎಂದು ದೂರಿದರು.

ಪ್ರಮುಖರಾದ ಶೇಷಗಿರಿ ನಾಯ್ಕ, ಸುರೇಶ ವೆರ್ಣೆಕರ, ಹಮ್ಮಣ್ಣ ನಾಯಕ, ರಾಯಪ್ಪ ಜಿ. ನಾಯ್ಕ ಮಾತನಾಡಿದರು. ಅರುಣ ಶೆಟ್ಟಿ, ವಿಜಯಕುಮಾರ ಗಾಂವಕರ, ಉದಯಕುಮಾರ ನಾಯ್ಕ, ನಾಗೇಶ ಗಾಂವಕರ, ಬ್ರಿಜೇಶ ಗಾಂವಕರ, ಶ್ರೀಕಾಂತ ನಾಯ್ಕ, ನಾಗರಾಜ ಗುನಗಾ, ಸುಗುಣ ಗಾಂವಕರ, ಇತರರಿದ್ದರು.

ಭೂಸ್ವಾಧೀನಕ್ಕೆ ಮೌಖಿಕ ಆದೇಶ: ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯ ಅವರು ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಸೀಬರ್ಡ್ ನೌಕಾ ನೆಲೆಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ 70 ಎಕರೆ ಭೂಮಿಯನ್ನು ಅಲಗೇರಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ. ಅದರಂತೆ ಕಂದಾಯ ನಿರೀಕ್ಷಕ ಅಮರ ನಾಯ್ಕ, ಉಪ ತಹಸೀಲ್ದಾರ್ ಪ್ರಮೋದ ನಾಯ್ಕ, ಗ್ರಾಮಲೆಕ್ಕಾಧಿಕಾರಿ ಭಾರ್ಗವ ನಾಯಕ, ಭೂ ಮಾಪಕ ರಾಜು ಪೂಜಾರಿ ಸ್ಥಳ ಗುರುತಿಸಿ ಈಗಾಗಲೇ ತಹಸೀಲ್ದಾರರಿಗೆ ವರದಿ ಒಪ್ಪಿಸಿದ್ದಾರೆ.

ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಯವರು ಮತ್ತೆ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿ ಸೆ. 27ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಂತಹ ಸಂದರ್ಭ ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ. | ವಿನೋದ ಗಾಂವಕರ ತಾಪಂ ಮಾಜಿ ಅಧ್ಯಕ್ಷ