ಭಾಜಪ ಹಾಲಿ ಸಂಸದರ ಉಳಿಸಿದ ಏರ್​ಸ್ಟ್ರೈಕ್

ಐದು ವರ್ಷಗಳಿಂದ ಪಕ್ಷದ ಕಾರ್ಯಕರ್ತರ ಜತೆಗೆ ಚಟುವಟಿಕೆಯಲ್ಲಿ ಭಾಗಿಯಾಗದೆ, ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗದೆ, ಸಂಘಟನೆಗೆ ಬಲ ನೀಡದೆ, ಜನಸಾಮಾನ್ಯರಲ್ಲೂ ಆಡಳಿತ ವಿರೋಧಿ ಅಲೆ ಕಟ್ಟಿಕೊಂಡಿದ್ದ 5-6 ರಾಜ್ಯ ಬಿಜೆಪಿ ಸಂಸದರನ್ನು ‘ಏರ್ ಸ್ಟ್ರೈಕ್’ ಬಚಾವ್ ಮಾಡಿದೆ!

ಫೆ.14ಕ್ಕೆ ಪಾಕಿಸ್ತಾನ ಪ್ರೇರಿತ ಜೆಇಎಂ ಭಯೋತ್ಪಾದಕರು ಪುಲ್ವಾಮಾದಲ್ಲಿ ದಾಳಿ ನಡೆಸಿ ಭಾರತೀಯ ಸೈನಿಕರ ಹತ್ಯೆ ಮಾಡಿದ್ದು, ನಂತರ ಭಾರತೀಯ ಸೇನೆ ಕೈಗೊಂಡ ಪ್ರತಿಕ್ರಿಯಾತ್ಮಕ ಕಾರ್ಯಾಚರಣೆ ನಂತರ ಹಾಲಿ ಸಂಸದರ ವಿರುದ್ಧದ ಅಲೆ ಬಹುತೇಕ ಅಳಿಸಿಹೋಗಿದೆ ಎಂಬುದು ಬಿಜೆಪಿ ನಾಯಕರ ಅಬಿಪ್ರಾಯ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದ್ದ ರಾಷ್ಟ್ರೀಯ ಬಿಜೆಪಿ ಮುಖಂಡರು, ಸ್ಥಳೀಯವಾಗಿ ಕಾರ್ಯಕರ್ತರ ವಿರೋಧ ಇದ್ದ 5-6 ಸಂಸದರನ್ನು ಗುರುತಿಸಿದ್ದರು. ಕೇಂದ್ರೀಯ ಚುನಾವಣಾ ಸಮಿತಿ ಸಭೆವರೆಗೂ ಕಾದು ನೋಡಿ, ತೀರಾ ಅವಶ್ಯಕತೆ ಬಿದ್ದರೆ ಹಾಲಿ ಸಂಸದರನ್ನು ಬದಲಾವಣೆ ಮಾಡುವ ಚಿಂತನೆಯಲ್ಲಿದ್ದರು.

ಆದರೆ, ಇತ್ತೀಚಿನ ದಿನಗಳಲ್ಲಿ ಅದೇ ಸ್ಥಳೀಯ ಕಾರ್ಯಕರ್ತರು ಸಂಸದರನ್ನು ಬದಲಿಸದಿರುವಂತೆ, ಇನ್ನು ಮುಂದೆ ಪಕ್ಷದ ಜತೆ ಸಮನ್ವಯದಿಂದ ಕೆಲಸ ಮಾಡಲು ತಿಳಿಹೇಳಿ ಸಾಕು ಎಂದು ಹೇಳುತ್ತಿರುವುದು ರಾಜ್ಯ ನಾಯಕರಲ್ಲಿ ಅಚ್ಚರಿ ಮೂಡಿಸಿದೆ. ಇಷ್ಟರ ನಂತರವೂ ಹಾಲಿ ಸಂಸದರ ಬದಲಾವಣೆ ಕುರಿತು ರಾಷ್ಟ್ರೀಯ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.

ಮೋದಿ ಸಲುವಾಗಿ ಗೆಲ್ಲಿಸಿ!

ಇಷ್ಟರ ನಂತರವೂ ಕೆಲವು ಕಡೆ ಸಂಸದರ ಮೇಲಿನ ಕೋಪ ಕಡಿಮೆಯಾಗಿಲ್ಲ. ಇಂತಹ ಸ್ಥಳಗಳಲ್ಲಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮೋದಿ ಗುರಾಣಿಯನ್ನು ನಾಯಕರು ಬಳಸುತ್ತಿದ್ದಾರೆ. ಕಳೆದ ನಾಲ್ಕೂಮುಕ್ಕಾಲು ವರ್ಷದಲ್ಲಿ ಮೋದಿಯವರು ಮಾಡಿದಷ್ಟು ಅಭಿವೃದ್ಧಿಯನ್ನು ಯಾರೂ ಮಾಡಿಲ್ಲ. ಅವರ ಕೈ ಬಲಪಡಿಸಿದರೆ ದೇಶದ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ. ಅವರೇನಾದರೂ ಸೋತರೆ ದೇಶದ ಜತೆಗೆ ಪಕ್ಷಕ್ಕೂ ನಷ್ಟ ಎಂದು ನಾಯಕರು ಹೇಳುವ ಮೂಲಕ ಮನವೊಲಿಕೆ ಮಾಡುತ್ತಿದ್ದಾರೆ.

ಮುಂದಾದರೂ ಸರಿಯಿರಲಿ

ಸಣ್ಣಪುಟ್ಟ ಗೊಂದಲಗಳಿರುವ ಕ್ಷೇತ್ರ ಹೊರತುಪಡಿಸಿ ಕೆಲವೆಡೆ ಹಾಲಿ ಸಂಸದರನ್ನು ಬದಲಿಸುವ ಚಿಂತನೆಯನ್ನು ಬಿಜೆಪಿ ನಡೆಸುತ್ತಿತ್ತು. ಸಂಘ ಪರಿವಾರದ ಸಂಘಟನೆಗಳೂ ಹಾಲಿ ಸಂಸದರ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದವು. ಈ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದಾಗೆಲ್ಲ ಕಾರ್ಯಕರ್ತರಿಂದ ದೂರುಗಳೇ ಬರುತ್ತಿದ್ದವು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಸೇನೆ ಕೈಗೊಂಡ ಕಾರ್ಯಾಚರಣೆ ನಂತರ ಮೋದಿ ಅಲೆ ತೀವ್ರಗೊಂಡಿದೆ. ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರಿಂದಲೇ ಇದು ಸಾಧ್ಯವಾಗಿದ್ದು ಎಂಬ ಮನೋಭಾವ ಜನರಲ್ಲಿ ಮೂಡಿದೆ. ಹೀಗಾಗಿ ಹಾಲಿಗಳೇ ಮುಂದುವರಿಯಲಿ. ಈಗ ಬೇರೆ ಅಭ್ಯರ್ಥಿ ನೀಡಿದರೆ ಕ್ಷೇತ್ರದಲ್ಲಿ ಪರಿಚಯಿಸಬೇಕು. ಇವರು ಗೆದ್ದ ನಂತರ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಲು ಸೂಚನೆ ನೀಡಿ ಎನ್ನುವ ಅಭಿಪ್ರಾಯ ಬರುತ್ತಿದೆ ಎಂದು ನಾಯಕರು ತಿಳಿಸಿದ್ದಾರೆ.

ಸಂಸದರ ತಪ್ಪಿಗೆ ಸಮರ್ಥನೆ ಇಲ್ಲ

ಹಾಲಿ ಸಂಸದರ ಮೇಲಿನ ಕಾರ್ಯಕರ್ತರ ಅಸಮಾಧಾನಕ್ಕೆ ನಾಯಕರ ಬಳಿ ಉತ್ತರವಿಲ್ಲ. 5 ವರ್ಷದಲ್ಲಿ ನಮ್ಮ ಸಂಸದರು ಬಿಜೆಪಿ ಕಾರ್ಯಕರ್ತರಿಗಿಂತಲೂ ಜೆಡಿಎಸ್​ನವರಿಗೆ ಸಹಾಯ ಮಾಡಿದ್ದೇ ಹೆಚ್ಚು, ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೂ ಆಗುತ್ತಿರಲಿಲ್ಲ, ಕ್ಷೇತ್ರದತ್ತ ಪ್ರವಾಸ ಮಾಡಿದ್ದೂ ಕಡಿಮೆ, ಜನರಿಗೆ ಕೆಲಸ ಮಾಡುವ ಬದಲು ಕುಟುಂಬವನ್ನು ಬೆಳೆಸಿದ್ದಾರೆ ಎಂಬುದು ಸೇರಿ ಅನೇಕ ದೂರುಗಳು ಬಂದಿವೆ. ಈ ಬಾರಿ ಆಗಿಹೋಗಿದೆ. ಇನ್ನೊಮ್ಮೆ ಅವಕಾಶ ನೀಡೋಣ, ವರಿಷ್ಠರು ತೀರ್ಮಾನ ಕೈಗೊಳ್ಳಲಿ, ನಮಗೆ ಪಕ್ಷ ಮುಖ್ಯವೇ ಹೊರತು ಅಭ್ಯರ್ಥಿಯಲ್ಲ ಎಂಬಂತಹ ಸಮಾಧಾನದ ಮಾತುಗಳನ್ನು ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ.

| ರಮೇಶ ದೊಡ್ಡಪುರ, ಬೆಂಗಳೂರು