ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಹಿನ್ನಲೆ ರಾಜಧಾನಿಯಲ್ಲಿ ನಡೆಯಲಿರೋ ಏರ್​​ ಶೋಗೆ ಭದ್ರತೆ

ಬೆಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಫೆ.20 ರಿಂದ 24ರವರೆಗೆ ನಡೆಯಲಿರುವ ಏರ್​​ ಶೋಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಬೆಂಗಳೂರು ಪೊಲೀಸರಿಗೆ ಇಂಟಲಿಜೆನ್ಸ್​ ಬ್ಯೂರೋ, ಸ್ಟೇಟ್ಸ್ ಇಂಟಲಿಜೆನ್ಸ್ ಮತ್ತು ಏರ್ ಶೋ ಇಂಟಲಿಜೆನ್ಸ್ ರಕ್ಷಣೆ ಕಾರ್ಯಾಚಾರಣೆಯಲ್ಲಿ ಕೈಜೋಡಿಸಲಿದ್ದಾರೆ. ನಗರದಲ್ಲಿನ ಪಿಜಿ, ಅಪಾರ್ಟ್ಮೆಂಟ್ ಹಾಗೂ ಹೊಟೇಲ್ ರೆಸ್ಟೋರೆಂಟ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಏರ್ ಪೋರ್ಸ್ ಒಳಗಡೆ ಮತ್ತು ಹೊರಗಡೆ ಸಿಐಎಸ್​ಎಫ್​ನಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಮಾಹಿತಿ ಕಲೆ ಹಾಕಲು ಸೂಚನೆ
ಯಲಹಂಕ ಏರ್ ಪೊರ್ಸ್ ವಾಯುನೆಲೆ ಒಳ ಮತ್ತು ಹೊರ ಎರಡು ಕಿ.ಮೀ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದ್ದು, ನಗರದಲ್ಲಿ ಹೊಸದಾಗಿ ಯಾರ್ಯಾರು ವಾಸವಿದ್ದಾರೆ? ಅವರ ಏನು ವೃತ್ತಿ? ಯಾವ ಮೂಲದವರು ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿನ ವಿಭಾಗದಲ್ಲಿನ ಠಾಣೆಗಳಿಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ.

ಟ್ರಾಫಿಕ್ ಜಾಮ್
ಏರ್ ಶೋಗೆ ಎರಡು ದಿನ ಬಾಕಿ ಉಳಿದಿರುವಾಗಲೇ ಬಳ್ಳಾರಿ ರಸ್ತೆಯ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಯಲಹಂಕ ವಾಯುನೆಲೆ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಏರ್ಪೋರ್ಟ್ ಕಡೆ ಪ್ರಯಾಣಿಸುವವರಿಗೆ ಟ್ರಾಫಿಕ್​ ಬಿಸಿ ತಟ್ಟಿದೆ. ಇಂದು ಮಂಜಾನೆಯಿಂದಲೇ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.

ಈಗಾಗಲೇ ರಿಹರ್ಸಲ್ ಆರಂಭ
ಫೆ.20ರಿಂದ ಶುರುವಾಗುವ ಏರ್​ ಶೋಗೆ ಈಗಾಗಲೇ ವಿಮಾನಗಳು ರಿಹರ್ಸಲ್ ಆರಂಭಿಸಿವೆ. ಈಗಾಗಲೇ ಭಾರತೀಯ ವಾಯುಸೇನೆ ಸೇರುತ್ತಿರುವ ಮೊದಲ ಯುದ್ಧ ವಿಮಾನ ರಫೇಲ್ ಕೂಡ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು, ತನ್ನ ಸಾಮರ್ಥ್ಯ ಪ್ರದರ್ಶಿಸಲು ತಯಾರಾಗಿದೆ. ಉಳಿದಂತೆ ಸೂರ್ಯಕಿರಣ್, ಸ್ವದೇಶಿ ನಿರ್ಮಿತ ಸಾರಸ್, ಯಕೋವ್ ಲೇವ್ಸ್, ಎಇಡಬ್ಲ್ಯು ಅಂಡ್ ಸಿ, ಎಚ್​ಎಎಲ್​ ನಿರ್ಮಿತ ಎಎಲ್​ಎಚ್​ ಹೆಲಿಕಾಪ್ಟರ್, ಎಂಐ 17, ಎಂಐ 17 ವಿ5 ಹೆಲಿಕಾಪ್ಟರ್​ಗಳು ಪ್ರದರ್ಶನ ನೀಡಲಿವೆ.(ದಿಗ್ವಿಜಯ ನ್ಯೂಸ್​)