ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ

ಬೆಂಗಳೂರು: ಏರ್​ ಶೋ ಪ್ರದರ್ಶನ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಪತನಗೊಂಡು ಒಬ್ಬ ಪೈಲಟ್​ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪೈಲಟ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೆಬ್ಬಾಳದ ಬಳಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಸೂರ್ಯಕಿರಣ್ ಹೆಸರಿನ ಎರಡು ಲಘು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಹುತಾತ್ಮ ಸೇನಾ ಅಧಿಕಾರಿ ಸಂದೀಪ್ ಉನ್ನಿ ಕೃಷ್ಣನ್ ಮನೆಯ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ.

ತುರ್ತು ನಿರ್ಗಮನ ದ್ವಾರದಿಂದ ಜಾರಿಕೊಂಡು ಪ್ಯಾರಾಚೂಟ್​ ಮೂಲಕ ಕೆಳಕ್ಕೆ ಜಿಗಿಯುವ ಮೂಲಕ ಅವಘಡದಿಂದ ಪೈಲಟ್​​ಗಳು ಪಾರಾಗಲು ಯತ್ನಿಸಿದ್ದರು. ಪ್ರಕರಣ ಕುರಿತು ವಾಯುಸೇನೆ ತನಿಖೆಗೆ ಆದೇಶಿಸಿದೆ.

ಸ್ಥಳೀಯರಿಬ್ಬರ ಸಾವು ಶಂಕೆ
ವಿಮಾನಗಳು ಡಿಕ್ಕಿ ಹೊಡೆದು ಸ್ಥಳೀಯ ಮನೆಯೊಂದರ ಮೇಲಿ ಬಿದ್ದಿದ್ದು, ಸ್ಥಳೀಯರಿಬ್ಬರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯುದ್ಧ ವಿಮಾನಗಳೆರಡು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ವಿಮಾನ ಅವಶೇಷಗಳನ್ನು ಸ್ಥಳದಿಂದ ತೆಗೆದಿದ್ದಾರೆ. ನಗರ ಪೊಲೀಸ್​ ಆಯುಕ್ತರಾದ ಸುನೀಲ್​ ಕುಮಾರ್​ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೂರ್ಯಕಿರಣ ಯುದ್ಧ ವಿಮಾನದ ವಿಶೇಷತೆ
# ಸೂರ್ಯಕಿರಣ್ ವಿಮಾನಗಳು 1960ರಲ್ಲಿ ನಿರ್ಮಾಣ
# 1996ರಲ್ಲಿ ವಾಯುಪಡೆಗೆ ಸೇರ್ಪಡೆ
# ಪೈಲಟ್‌ಗಳಿಗೆ ತರಬೇತಿ ನೀಡಲು ಈ ವಿಮಾನಗಳ ಬಳಕೆ
# ಗಂಟೆಗೆ 780 ಕಿ.ಮೀ ವೇಗದಲ್ಲಿ ಹಾರಾಟ ಸಾಮರ್ಥ್ಯ
# ಸಾಹಸ ಪ್ರದರ್ಶನಕ್ಕೆ ಸೂರ್ಯಕಿರಣ ವಿಮಾನಗಳು ಹೆಸರುವಾಸಿ
# ಎಚ್‌ಎಎಲ್‌ನಿಂದ ತಯಾರಾಗಿರುವ ವಿಮಾನಗಳು
# ಸೂರ್ಯಕಿರಣ್ ಏರೋಬ್ಯಾಟಿಕ್ಸ್‌ ತಂಡದಿಂದ ಪ್ರದರ್ಶನ
# 5 ಟನ್​ ತೂಕವಿರುವ ಸೂರ್ಯಕಿರಣ
# ವೈಮಾನಿಕ ಪ್ರದರ್ಶನ ನೀಡುವ ಸೂರ್ಯಕಿರಣ
# ಶ್ರೀಲಂಕಾದಿಂದ ಸಿಂಗಾಪುರದವರೆಗೆ ಒಟ್ಟು 450 ಪ್ರದರ್ಶನ
# 1996ರ ಮೇ27ರಂದು ಬೀದರ್‌ನಲ್ಲಿ 6 ಪ್ರದರ್ಶನ ನೀಡಿತ್ತು
# ಬೀದರ್​ನ ಏರ್​​ ಬೇಸ್​ನಲ್ಲಿದೆ ಸೂರ್ಯಕಿರಣ ವಿಮಾನದ ಮುಖ್ಯ ಕೇಂದ್ರ ಕಚೇರಿ

ಫೆ.20 ರಿಂದ 24ರವರೆಗೆ ಯಲಹಂಕದ ವಾಯುನೆಲೆಯಲ್ಲಿ ಏರ್​ ಶೋ ಆರಂಭವಾಗಲಿದ್ದು, ಕಳೆದ ಕೆಲ ದಿನಗಳಿಂದ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿವೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *