ಅಂಗೈಯಲ್ಲೇ ಆಕಾಶ

ಆಕಾಶಕ್ಕೆ ನೆಗೆದು ಸಾಧನೆಗೆ ಇನ್ನಷ್ಟು ವಿಸõತ ಅರ್ಥ ತಂದುಕೊಟ್ಟ ಸಾಮರ್ಥ್ಯ ಈ ಮಹಿಳೆಯರದ್ದು. ಇವರು ವೈಮಾನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕಿಯರು. ನಮ್ಮ ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ವೃದ್ಧಿಸುತ್ತಿದೆ. ಅವರವರ ಕ್ಷೇತ್ರದಲ್ಲಿ ‘ಅತ್ಯುನ್ನತ ಸಾಧನೆಗೈದ ಮೊದಲ ಮಹಿಳೆ’ ಎಂಬ ಖ್ಯಾತಿ ಪಡೆದುಕೊಂಡ ಕೆಲ ಸಾಧಕಿಯರು ‘ಏರೋ ಇಂಡಿಯಾ’ ಅಂಗವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಎದುರಿಸಿದ ಸವಾಲುಗಳು, ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ರೋಚಕ ಕಥನ ಇಲ್ಲಿದೆ.

| ಅಭಿಲಾಷ್ ಪಿಲಿಕೂಡ್ಲು

ಆಗಸದಲ್ಲಿ ಯೋಗ!

ಸೇನೆಯ ಮಹಿಳಾ ಅಧಿಕಾರಿಗಳ ಪರ್ವತಾರೋಹಣ ತಂಡದಲ್ಲಿರುವ ಕ್ಯಾಪ್ಟನ್ ಅಪರಾಜೀತ್ ಶರ್ವ, ಉತ್ತರಾಖಂಡದಲ್ಲಿರುವ 6,532 ಮೀ.ಎತ್ತರದ ಭಗೀರಥ್-2 ಪರ್ವತವೇರಿ 19,022 ಅಡಿ ಎತ್ತರದಲ್ಲಿ ಯೋಗ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಅಧಿಕಾರಿ. ‘ಪ್ಯಾರಾಟ್ರೂಪರ್ ತಂಡದಲ್ಲಿರುವ ನನಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸೇನೆಯಲ್ಲಿ ಮಹಿಳೆ ಅಥವಾ ಪುರುಷ ಅಧಿಕಾರಿ ಎಂಬ ಭೇದವಿಲ್ಲ. ತರಬೇತಿ ಪಡೆಯುವ ಸಂದರ್ಭದಲ್ಲಿ, ತಂಡದ ಇಬ್ಬರು ಯುವಕರಿಗೆ ವಿಮಾನದಿಂದ ಹೊರಜಿಗಿಯುವ ಭಯವಿತ್ತು. ಆದರೆ, ನಾನು ಯಾವುದೇ ಭಯವಿಲ್ಲದೆ ಜಿಗಿದಿದ್ದನ್ನು ಕಂಡು ಅವರಲ್ಲೂ ಧೈರ್ಯ ಬಂದಿತ್ತು. ಸೇನೆಯಲ್ಲಿರುವ ಸರಂಜಾಮುಗಳ ಸಮಸ್ಯೆ ಮಹಿಳೆಯರು ಸೇನೆ ಸೇರಲು ಅಡ್ಡಿಯಾಗಬಾರದು. ಉದಾಹರಣೆಗೆ ಪರ್ವತಾರೋಹಣ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಟೆಂಟ್ ವ್ಯವಸ್ಥೆ ಇರುವುದಿಲ್ಲ. ಇವುಗಳಿಗೆ ಹೊಂದಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಗುಲಾಬಿ ಬಣ್ಣ, ಗಂಡು ಮಕ್ಕಳಿಗೆ ಹೆಣ್ಣಿಗನಂತೆ ಅಳುವುದನ್ನು ಬಿಡು ಎನ್ನುವುದು ಹೀಗೆ ಮಕ್ಕಳಲ್ಲಿ ಹೆಣ್ಣು, ಗಂಡು ಎಂಬ ಮನಃಸ್ಥಿತಿ ತುಂಬಬಾರದು’ ಎನ್ನುವುದು ಇವರ ಅಭಿಮತ.

ಕೊರೆಯುವ ಚಳಿಯಲ್ಲಿ…

ಸಮುದ್ರ ಮಟ್ಟದಿಂದ ಅಂದಾಜು 18-20 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್​ನಲ್ಲಿ ಹೆಲಿಕಾಪ್ಟರ್ ಇಳಿಸಿದ ಮೊದಲ ಮಹಿಳಾ ಸ್ಕಾ್ವಡ್ರನ್ ಲೀಡರ್ ಖುಷ್ಬೂ ಗುಪ್ತಾ. ಹಾಗೂ ಸಿಯಾಚಿನ್ ಬೇಸ್ ಕ್ಯಾಂಪ್​ನಲ್ಲಿ 6 ತಿಂಗಳ ಕಾಲ ಇದ್ದ ಏಕೈಕ ಮಹಿಳೆ. ದೆಹಲಿಯಲ್ಲಿ ಹುಟ್ಟಿ ಬೆಳೆದು 2007ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡರು. ಮೊದಲಿಗೆ ಬೇಸಿಕ್ ಹೆಲಿಕಾಪ್ಟರ್ ಚೀತಾದಲ್ಲಿ ತರಬೇತಿ ಪಡೆದು ನಂತರದಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ಪೈಲಟ್ ಆದರು. ವಾಯುಸೇನೆಯಲ್ಲಿರುವ ನಾಲ್ವರು ಮಹಿಳಾ ಕ್ವಾಲಿಫೈಡ್ ಇನ್​ಸ್ಟ್ರಕ್ಟರ್​ಗಳ ಪೈಕಿ ಗುಪ್ತಾ ಒಬ್ಬರು. ‘ದೊರೆತಂತಹ ಅವಕಾಶ ಕೈಚೆಲ್ಲದೆ, ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಸಿಯಾಚಿನ್ ಪಯೋನಿಯರ್ಸ್(114 ಹೆಲಿಕಾಪ್ಟರ್ ಯುನಿಟ್) ತಂಡದ ಭಾಗವಾದೆ. ಸಿಯಾಚಿನ್ ಪ್ರದೇಶದಲ್ಲಿ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಇದೆ. ಇಂತಹ ಪ್ರದೇಶದಲ್ಲಿ ನಮ್ಮ ಸಾಮರ್ಥ್ಯ ಮಾತ್ರವಲ್ಲದೆ ಹೆಲಿಕಾಪ್ಟರ್​ಗಳ ಸಾಮರ್ಥ್ಯವೂ ಪರೀಕ್ಷೆಗೊಳಗಾಗುತ್ತದೆ. ಸಿಯಾಚಿನ್ ಪ್ರದೇಶದಲ್ಲಿ ನಮ್ಮ ಸೈನಿಕರು ಮೈ ಕೊರೆಯುವ ಮೈನಸ್ 60 ಡಿಗ್ರಿ ಸೆಲ್ಸಿಯಸ್​ನಲ್ಲಿರುತ್ತಾರೆ. ತರಬೇತಿ ಸಂದರ್ಭ, ಹಿಮದಿಂದ ಕೂಡಿರುವ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್, ಹೆಲಿಕಾಪ್ಟರ್ ನಿರ್ವಹಣೆ ಬಗ್ಗೆ ಹೇಳಿಕೊಡಲಾಗುತ್ತದೆ. ಸಿಯಾಚಿನ್ ಬೇಸ್ ಕ್ಯಾಂಪ್​ನಲ್ಲಿ ಅಂದಾಜು 6 ತಿಂಗಳ ಕಾಲ ಇದ್ದ ಏಕೈಕ ಮಹಿಳೆ ನಾನು. ಹೀಗಾಗಿಯೇ ಗ್ಲೇಸಿಯರ್ ಕ್ವಾಲಿಫೈಡ್ ಕ್ಯಾಪ್ಟನ್ ಎಂದು ಗುರುತಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ಅನುಭವ ಹಂಚಿಕೊಳ್ಳಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನ (ಎಚ್​ಎಎಲ್)ಮೊದಲ ಮಹಿಳಾ ಪ್ರಧಾನ ವ್ಯವಸ್ಥಾಪಕಿ ಎಸ್. ತೆನ್ಜಿಮೋಯ್. ಸ್ವದೇಶಿ ಯುದ್ಧ ಹೆಲಿಕಾಪ್ಟರ್​ಗಳಾದ ಅಡ್ವಾನ್ಸ್ ಡ್ ಲೈಟ್ ಹೆಲಿಕಾಪ್ಟರ್ (ಎಎಲ್​ಎಚ್) ಹಾಗೂ ಲಘು ಯುದ್ಧ ಹೆಲಿಕಾಪ್ಟರ್(ಎಲ್​ಸಿಎಚ್) ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲೂ ಇವರು ತೊಡಗಿಸಿಕೊಂಡಿದ್ದರು. ರಕ್ಷಣಾ ವಲಯಕ್ಕಾಗಿಯೇ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ತಮ್ಮ ಜವಾಬ್ದಾರಿ ಕುರಿತು ಮಾತನಾಡಿದ ತೆನ್ಜಿಮೋಯ್, ‘ಮಹಿಳೆಯರು ಎಲ್ಲ ಸಿಬ್ಬಂದಿಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಕೆಲ ಪುರುಷರು ಮಹಿಳೆಯರಿಂದ ಆದೇಶ ಪಡೆದುಕೊಳ್ಳುವ ಸಂದರ್ಭದಲ್ಲಿ ವಿರೋಧಿಸುತ್ತಾರೆ. ನಮ್ಮ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ಗಮನವಿಟ್ಟು ಕೆಲಸ ಮಾಡುತ್ತಿದ್ದೇನೆ. ಮಹಿಳೆಯರು ಇಷ್ಟೊಂದು ಸಾಧನೆಗೈದ ಮೇಲೆ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು. ಯುವಜನತೆಗೆ ಮಾದರಿಯಾಗಲು ಶಾಲಾ-ಕಾಲೇಜುಗಳಲ್ಲಿ ವೈಮಾನಿಕ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಹಂಚಿಕೊಳ್ಳಬೇಕು’ ಎನ್ನುತ್ತಾರೆ.

ಹೆಲಿಕಾಪ್ಟರ್​ಗೆ ಮೊದಲ ವೈದ್ಯೆ

ಭಾರತೀಯ ವಾಯುಸೇನೆಯಲ್ಲಿರುವ ಅತಿ ದೊಡ್ಡ ಹೆಲಿಕಾಪ್ಟರ್ ಎಂಐ 17ನ ವೈದ್ಯೆ ಹೀನಾ ಜೈಸ್ವಾಲ್. ಯಲಹಂಕ ವಾಯುನೆಲೆಯ 112ನೇ ಹೆಲಿಕಾಪ್ಟರ್ ಯುನಿಟ್​ನಲ್ಲಿ ಕೋರ್ಸ್ ಪೂರೈಸಿರುವ ಫ್ಲೈಟ್ ಲೆಫ್ಟಿನೆಂಟ್. ಪ್ರತಿಷ್ಠಿತ ಫ್ಲೈಟ್ ಇಂಜಿನಿಯರ್ಸ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ದೇಶದ ಪ್ರಥಮ ಮಹಿಳಾ ಫ್ಲೈಟ್ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಂಡೀಗಢದ ಡಿ.ಕೆ. ಜೈಸ್ವಾಲ್ ಹಾಗೂ ಅನಿತಾ ಜೈಸ್ವಾಲ್ ದಂಪತಿಯ ಏಕೈಕ ಪುತ್ರಿಯಾಗಿರುವ ಹೀನಾ, ಚಿಕ್ಕವಯಸ್ಸಿನಿಂದಲೇ ವಾಯುಸೇನೆ ಸೇರುವ ಕನಸು ಹೊಂದಿದ್ದರು. ‘ಯುಟಿಟಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ಸ್ ಆಂಡ್ ಎಲೆಕ್ಟ್ರಾನಿಕ್ಸ್ ಪದವಿ ಪಡೆದು 2015ರ ಜ.5ರಂದು ವಾಯುಸೇನೆಯ ಇಂಜಿನಿಯರಿಂಗ್ ವಿಭಾಗಕ್ಕೆ ಸೇರ್ಪಡೆಯಾದೆ. ಏರ್​ವಿುಸೈಲ್ ಸ್ಕಾ್ವಡ್ರನ್​ನ ಫೈರಿಂಗ್ ತಂಡ ಮತ್ತು ಬ್ಯಾಟರಿ ಕಮಾಂಡರ್​ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದೆ. ‘ಇಂಜಿನಿಯರ್ ಆನ್ ಬೋರ್ಡ್’ ಎಂದು ನಮ್ಮನ್ನು ಕರೆಯುತ್ತಾರೆ. ಹೆಲಿಕಾಪ್ಟರ್​ನಲ್ಲಿರುವ ಸಂಕೀರ್ಣ ಉಪಕರಣಗಳು, ಸಿಸ್ಟಂಗಳು ಹಾಳಾದಂತಹ ಸಂದರ್ಭದಲ್ಲಿ ತಕ್ಷಣ ಸಮಸ್ಯೆ ಗುರುತಿಸಿ ಪರಿಹರಿಸುವ ಹೊಣೆ ನಮ್ಮ ಮೇಲಿರುತ್ತದೆ. ತುರ್ತು ಸಂದರ್ಭದಲ್ಲಿ ಕ್ಷಣಮಾತ್ರದಲ್ಲೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಹೊಣೆಯೂ ಇರುತ್ತದೆ. ಸಿಯಾಚಿನ್ ಗ್ಲೇಸಿಯರ್​ನಂತಹ ಪ್ರದೇಶದಿಂದ ಹಿಡಿದು ಅಂಡಮಾನ್​ವರೆಗೂ ಎಲ್ಲ ಕಾರ್ಯಾಚರಣೆಯಲ್ಲಿ ನಾವು ಭಾಗವಹಿಸುತ್ತೇವೆ’ ಎನ್ನುವ ಅಭಿಮಾನ ಇವರದ್ದು.

15 ಗಂಟೆ ವಿಮಾನಯಾನ!

15,300 ಕಿ.ಮೀ. ದೂರದ 15 ಗಂಟೆಗಳ ವಿಮಾನಯಾನಕ್ಕೆ ಕಮಾಂಡರ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ಹೊಂದಿರುವವರು ಕ್ಯಾ. ಕ್ಷಮ್ತಾ ಬಾಜಪೇಯ್. ‘ಸಣ್ಣ ವಯಸ್ಸಿನಲ್ಲಿ ಪಿ.ಟಿ.ಉಷಾ ರೀತಿ ಕ್ರೀಡಾಪಟು ಆಗಬೇಕೆಂದಿದ್ದೆ. ಆದರೆ ಹಾರಾಟದ ಚಟ ಹತ್ತಿಕೊಂಡರೆ ಕೆಳಗಿಳಿಯಲು ಸಾಧ್ಯವಿಲ್ಲ. ಕಾಲೇಜು ದಿನಗಳಲ್ಲಿ ಎನ್​ಸಿಸಿ ವಾಯುಪಡೆಯಲ್ಲಿದ್ದೆ. ಅಲ್ಲಿಂದಲೇ ವೈಮಾನಿಕ ಕ್ಷೇತ್ರಕ್ಕೆ ಮೊದಲ ಹೆಜ್ಜೆ ಇಟ್ಟೆ. ಮಧ್ಯಮ ವರ್ಗದಿಂದ ಬಂದ ನನಗೆ ಆರ್ಥಿಕ ಸಂಕಷ್ಟವೂ ಇತ್ತು. ಏರ್ ಇಂಡಿಯಾ ಅವಕಾಶ ನೀಡಿತು. ವಿಮಾನದೊಳಗಿನ ಯಂತ್ರಗಳು ಪೈಲಟ್ ಆಗಿ ಕೂತಿರುವ ವ್ಯಕ್ತಿ ಮಹಿಳೆಯೋ ಪುರುಷನೋ ಎನ್ನುವುದನ್ನು ನೋಡುವುದಿಲ್ಲ. ಪೈಲಟ್ ಎನ್ನುವುದು ಕೆಲಸವಲ್ಲ, ಉತ್ಸಾಹ. ಹೀಗಾಗಿಯೇ 2014ಕ್ಕೆ ಹೋಲಿಸಿದರೆ ಮಹಿಳಾ ಪೈಲಟ್​ಗಳ ಸಂಖ್ಯೆ ಶೇ.13 ಹೆಚ್ಚಾಗಿದೆ’ ಎನ್ನುವುದು ಇವರ ಅನಿಸಿಕೆ.

ಪಾಲಕರಲ್ಲಿ ಕನಸು

ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಪ್ಯುಟಿ ಕಮಾಂಡೆಂಟ್ ನಿಧಿ ಜೈಸ್ವಾಲ್. ‘ಮೀನುಗಾರರ ಕುಟುಂಬಗಳು ವಾಸಿಸುತ್ತಿರುವ ಪ್ರದೇಶದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪ್ರೇರಣೆ ನೀಡುತ್ತೇವೆ. ಮಕ್ಕಳಿಗಿಂತ ಮಕ್ಕಳ ಪಾಲಕರೇ ಕನಸು ಕಾಣುತ್ತಾರೆ. ‘ನನ್ನ ಮಗ, ಮಗಳು ನಿಮ್ಮಂತೆಯೇ ಸಮವಸ್ತ್ರ ಧರಿಸಬಹುದೇ?’ ಎಂದು ಕೇಳುತ್ತಾರೆ. ಪಾಲಕರಲ್ಲಿ ಮಕ್ಕಳನ್ನು ಸೇನೆಗೆ ಕಳುಹಿಸುವ ಕನಸು ಕಂಡರೆ ನಮಗೂ ಸಂತೋಷವಾಗುತ್ತದೆ ಎನ್ನುತ್ತಾರೆ.

ನಾಸಾ ವಿಜ್ಞಾನಿ

ಅಮೆರಿಕದ ನಾಸಾದಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮಹಿಳೆ ಶ್ರೀಜಾ ನಾಗ್. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿನಿಯರು ಹೋಗದೇ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ‘ಪದವಿ ಕೋರ್ಸಗಳಲ್ಲಿ ಶೇ.50 ವಿದ್ಯಾರ್ಥಿನಿಯರು ಕಂಡುಬಂದರೆ, ಪಿಎಚ್​ಡಿಯಂಥ ಉನ್ನತ ಶಿಕ್ಷಣದಲ್ಲಿ ಈ ಸಂಖ್ಯೆ ಶೇ.5ಕ್ಕೆ ಇಳಿಯುತ್ತದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಈ ಕಾರಣಕ್ಕಾಗಿಯೇ ಏರಿಕೆಯಾಗಿಲ್ಲ. ವಿಜ್ಞಾನ, ಏರೋಸ್ಪೇಸ್ ಕ್ಷೇತ್ರದಲ್ಲೂ ಮಹಿಳೆಯರ ಸಂಖ್ಯೆ ಶೇ.10 ಮಾತ್ರ. ಎಲ್ಲ ದೇಶಗಳಲ್ಲೂ, ಎಲ್ಲ ಕ್ಷೇತ್ರದಲ್ಲೂ ಪುರುಷ-ಮಹಿಳೆ ವೇತನ ವ್ಯತ್ಯಾಸವಿದೆ. ಸ್ವ ಸಾಮರ್ಥ್ಯದಿಂದ ಈ ಸ್ಥಾನಕ್ಕೆ ಬಂದಿದ್ದೇನೆ ಎನ್ನುವ ಹೆಮ್ಮೆಯೊಂದಿಗೆ ಸಮಾನ ವೇತನ ಕೇಳುವ ಧೈರ್ಯವನ್ನು ಮಹಿಳೆಯರು ಮಾಡಬೇಕಿದೆ’ ಎನ್ನುವುದು ಇವರ ಧೋರಣೆ.