ಏರ್​ ಇಂಡಿಯಾದ ಹಿರಿಯ ಪೈಲೆಟ್​ ಒಬ್ಬರಿಂದ ಮಹಿಳಾ ಪೈಲೆಟ್​ಗೆ ಕಿರುಕುಳ ಆರೋಪ, ದೂರು ದಾಖಲು

ನವದೆಹಲಿ: ಹಿರಿಯ ಪೈಲೆಟ್​ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಪೈಲೆಟ್ ಒಬ್ಬರು ಆಡಳಿತ ಮಂಡಳಿಗೆ ದೂರು ನೀಡಿದ ಹಿನ್ನೆಲೆ ಏರ್​ ಇಂಡಿಯಾ ಸಂಸ್ಥೆ ತನಿಖೆಗೆ ಆದೇಶಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹಿರಿಯ ಪೈಲೆಟ್​ ಒಬ್ಬರು ತಮಗೆ ಅನುಚಿತವಾದ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಮಹಿಳಾ ಪೈಲೆಟ್​ ದೂರಿನಲ್ಲಿ ತಿಳಿಸಿರುವಂತೆ, ತರಬೇತಿ ಮುಗಿದ ಬಳಿಕ ಇಬ್ಬರೂ ನಗರದ ಹೋಟೆಲ್​ ಒಂದಕ್ಕೆ ಊಟಕ್ಕೆ ಹೋಗೋಣವೆಂದು ಕರೆದಿದ್ದರು. ನಾನು ಅವರೊಂದಿಗೆ ಕೆಲವು ಬಾರಿ ವಿಮಾನದಲ್ಲಿ ಹಾರಾಟ ನಡೆಸಿದ ವೇಳೆ ಅವರು ಸಭ್ಯರಂತೆ ಕಂಡು ಬಂದಿದ್ದರಿಂದ ತಾನು ಒಪ್ಪಿದ್ದು, ರಾತ್ರಿ 8ಕ್ಕೆ ಹೋಟೆಲ್​ಗೆ ಹೋಗಿದ್ದೆವು. ಈ ವೇಳೆ ನನಗೆ ತೊಂದರೆ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ವಿವಾಹಿತ ಜೀವನದಲ್ಲಿ ಹೇಗೆ ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಅತೃಪ್ತಿ ಹೊಂದಿರುವ ಬಗ್ಗೆ ಹೇಳಿಕೊಂಡ ಬಳಿಕ ನಿಮ್ಮ ಪತಿ ಇಲ್ಲದೆ ಹೇಗೆ ಬದುಕುತ್ತಿದ್ದೀರಿ, ನಿಮಗೆ ನಿತ್ಯ ಲೈಂಗಿಕ ಕ್ರಿಯೆ ಬೇಕೆನಿಸುವುದಿಲ್ಲವೇ ಎಂದು, ಅಸಭ್ಯವಾದ ಪ್ರಶ್ನೆಗಳನ್ನು ನನಗೆ ಕೇಳಿದರು. ಇದರಿಂದಾಗಿ ತಾನು ನಿಮ್ಮೊಂದಿಗೆ ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ ಎಂದು ಹೇಳಿ ಎದ್ದು ಬಂದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ತಾನು ಎದ್ದು ಬಂದು ಕ್ಯಾಬ್​ಗೆ ಕಾಯುವ ವೇಳೆ ಅವರ ವರ್ತನೆ ತುಂಬಾ ಕೆಟ್ಟದಾಗಿತ್ತು. ಮತ್ತು ಅವಮಾನಕರವಾಗಿತ್ತು. ಈ ವೇಳೆ ತಾನು ಭಯಗೊಂಡಿದ್ದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)