ಸಂಕಷ್ಟದಲ್ಲಿ ಏರ್ ಇಂಡಿಯಾ

ನವದೆಹಲಿ: ಸಾಲದ ಸುಳಿಗೆ ಸಿಲುಕಿರುವ ಜೆಟ್ ಏರ್​ವೇಸ್ ವಿಮಾನಯಾನ ಸಂಸ್ಥೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕೂಡ ಸಾಲ ಮರುಪಾವತಿಗೆ (ವಾರ್ಷಿಕ ಬಡ್ಡಿ) ದಾರಿ ಕಾಣದೆ ಪರದಾಡುತ್ತಿದೆ.

ಏರ್ ಇಂಡಿಯಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 9000 ಕೋಟಿ ರೂ. ಸಾಲ ಮರುಪಾವತಿಸಬೇಕಿದ್ದು, ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯುತ್ತಿದೆ. ಆದರೆ ಲೋಕಸಭಾ ಚುನಾವಣೆ ಮುಗಿಯುವ ತನಕ ಸರ್ಕಾರದಿಂದ ಏರ್ ಇಂಡಿಯಾಗೆ ಹಣಕಾಸು ನೆರವು ಸಿಗುವುದು ಕಷ್ಟ. ಹೊಸ ಸರ್ಕಾರ ರಚನೆ ಆಗುವವರೆಗೂ ಏರ್ ಇಂಡಿಯಾಗೆ ಸಂಬಂಧಿತ ಮಹತ್ತರ ಆದೇಶ ಅಥವಾ ಪುನಶ್ಚೇತನ ಕಾರ್ಯಯೋಜನೆ ಜಾರಿಗೆ ಬರಲಾಗುವುದಿಲ್ಲ. ಹೀಗಾಗಿ ಕೆಲ ಮಾರ್ಗಗಳ ವಿಮಾನ ಸಂಚಾರ ಸ್ಥಗಿತ ಹಾಗೂ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾದರೂ ಅಚ್ಚರಿ ಇಲ್ಲ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ವಿತ್ತ ಸಚಿವಾಲಯಕ್ಕೆ ಮೊರೆ

ಹೊಸ ಸರ್ಕಾರ ರಚನೆವರೆಗೂ ಕಾಯುವುದರಿಂದ ಏರ್ ಇಂಡಿಯಾ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳಬಹುದು. ಇದರಿಂದ ಸಿಬ್ಬಂದಿ ಪ್ರತಿಭಟನೆಗೂ ಮುಂದಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಸಾಧ್ಯವಾದ ಮಟ್ಟಿಗೆ ನೆರವು ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ನೇತೃತ್ವದ ಸರ್ಕಾರ ಮತ್ತೆ ರಚನೆಯಾದಲ್ಲಿ ಏರ್ ಇಂಡಿಯಾದ ಶೇ. 100 ಪಾಲುದಾರಿಕೆಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದೆ. ಏರ್ ಇಂಡಿಯಾಗೆ ಮತ್ತಷ್ಟು ಬಂಡವಾಳ ಹೂಡುವ ಉದ್ದೇಶ ಎನ್​ಡಿಎ ಮೈತ್ರಿಕೂಟದ ಸರ್ಕಾರಕ್ಕೆ ಇಲ್ಲ ಎಂದು ಈಗಾಗಲೇ ಸಂಪುಟದ ಅನೇಕ ಸಚಿವರು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿನಿತ್ಯ 6 ಕೋಟಿ ರೂ. ನಷ್ಟ

ಗಡಿ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಗಡಿಯನ್ನು ವಿಮಾನ ಸಂಚಾರಕ್ಕೆ ಬಂದ್ ಮಾಡಿದೆ. ಇದರಿಂದಾಗಿ ಪರ್ಯಾಯ ಮಾರ್ಗದಲ್ಲಿ ವಿಮಾನ ಹಾರಾಟ ನಡೆಯುತ್ತಿದೆ. ಹೀಗಾಗಿ ಪ್ರತಿ ದಿನ ಆರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದರ ಪರಿಣಾಮವಾಗಿ ಹಲವು ಅಂತಾರಾಷ್ಟ್ರೀಯ ಮಾರ್ಗದ ವಿಮಾನಗಳ ಸಂಚಾರವನ್ನು ಸಂಸ್ಥೆ ಈಗಾಗಲೇ ರದ್ದುಗೊಳಿಸಿದೆ.

ಬಡ್ಡಿ ಕಟ್ಟೋದಕ್ಕೂ ಆಗುತ್ತಿಲ್ಲ!

ವಿಶೇಷ ಬಂಡವಾಳ ಹೂಡಿಕೆ ಮೂಲಕ ಸರ್ಕಾರ ಏರ್ ಇಂಡಿಯಾ ಹಣಕಾಸು ಮುಗ್ಗಟ್ಟು ತಿಳಿಯಾಗಿಸಲು ಯತ್ನಿಸಿತು. ಅದರಂತೆ ವಾರ್ಷಿಕ ಬಡ್ಡಿ ಪ್ರಮಾಣ ಕೂಡ ತಗ್ಗಿತು. ಹಲವು ಬ್ಯಾಂಕ್​ಗಳಿಗೆ ಸಂಸ್ಥೆ ಪಾವತಿಸಬೇಕಿದ್ದ ಸಾಲದ ಮಾಸಿಕ ಕಂತುಗಳ ಪ್ರಮಾಣ ಕೂಡ ಇಳಿಕೆಯಾಯಿತು. ಆದರೆ ಪ್ರಸ್ತುತ ವರ್ಷ ಈ ಮೊತ್ತವನ್ನು ಸರ್ಕಾರ ಪಾವತಿ ಮಾಡಿಲ್ಲ. ಈಗ ಚುನಾವಣೆ ನಡೆಯುತ್ತಿರುವ ಕಾರಣ ಹಣ ಬಿಡುಗಡೆ ಕಷ್ಟ. ಹೀಗಾಗಿ ಏರ್ ಇಂಡಿಯಾ ಅತಂತ್ರ ಸ್ಥಿತಿಯಲ್ಲಿ ಸಿಲುಕಿದೆ.

 

ಜೆಟ್ ಸಿಬ್ಬಂದಿಗೆ ನೆರವು

ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಜೆಟ್ ಏರ್​ವೇಸ್ ಸಿಬ್ಬಂದಿಯ ನೆರವಿಗೆ ಏರ್ ಇಂಡಿಯಾ ಧಾವಿಸಿದೆ. ಸ್ವತಃ ಸಾಲದ ಬಿಕ್ಕಟ್ಟು ಎದುರಿಸುತ್ತಿದ್ದರೂ, ಜೆಟ್ ಏರ್​ವೇಸ್​ನ 150 ಕ್ಯಾಬಿನ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಸಿದ್ಧತೆ ನಡೆಸಿದೆ. ಜತೆಗೆ ಹಾರಾಟ ನಿಲ್ಲಿಸಿರುವ ಅಂತಾರಾಷ್ಟ್ರೀಯ ಮಾರ್ಗದ ಐದು ಬೋಯಿಂಗ್ 777 ವಿಮಾನಗಳನ್ನು ಗುತ್ತಿಗೆ ಪಡೆಯಲು ಏರ್ ಇಂಡಿಯಾ ಮುಂದಾಗಿದೆ. ಲಂಡನ್, ಸಿಂಗಾಪುರ, ದುಬೈ ಮಾರ್ಗವಾಗಿ ಸಂಚರಿಸುತ್ತಿದ್ದ ವಿಮಾನಗಳು ಇವು. ಏ.28 ರಿಂದ 19 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸಲು ಜೆಟ್ ವಿಮಾನದ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ವಿಶೇಷ ದರದಲ್ಲಿ ಟಿಕೆಟ್ ವಿತರಿಸಲು ಕೂಡ ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ.