ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ಮುಂಬೈನಲ್ಲಿ ಬಂಧನ

ಮುಂಬೈ: ಇಂಡಿಗೋ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರು ಮೂಲದ ವ್ಯಕ್ತಿಯನ್ನು ಮುಂಬೈ ಏರ್​ಪೋರ್ಟ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಾಜು ಗಂಗಪ್ಪ (28)ಬಂಧಿತನಾಗಿದ್ದು ಈತ ಬೆಂಗಳೂರಿನವನು. ಮುಂಬೈ ವಿಮಾನ ನಿಲ್ದಾಣದಿಂದ ವಿಮಾನ ಹೊರಡುವುದಕ್ಕೂ ಮೊದಲು ಘಟನೆ ನಡೆದಿದೆ. 20 ವರ್ಷದ ಗಗನಸಖಿಯ ಬಳಿಯಿಂದ ಹಾದುಹೋಗಬೇಕಾದರೆ ಆತ ಆಕೆಯ ಹಿಂಭಾಗವನ್ನು ಸ್ಪರ್ಶಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಅದಕ್ಕೆ ಪ್ರತಿಯಾಗಿ ಆಕೆ ಛೀಮಾರಿ ಹಾಕಿದಾಗ, ತಿರುಗಿ ನಿಂದಿಸಿದ್ದಾನೆ.

ಗಗನಸಖಿ ತನ್ನ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದಾಗ ರಾಜು ಗಂಗಪ್ಪನನ್ನು ಆತನ ಬ್ಯಾಗ್​ಗಳ ಸಮೇತ ಕೆಳಗೆ ಇಳಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವಶಕ್ಕೆ ಆತನನ್ನು ನೀಡಿ, ಅದಾದ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಏರ್​ಪೋರ್ಟ್​ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೋರ್ಟ್​ಗೆ ಹಾಜರು ಪಡಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.