ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಇನ್ನು ಮುಂದೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ !

ನವದೆಹಲಿ: ಪಾಕಿಸ್ತಾನದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡು ಅಲ್ಲಿನ ಸೈನಿಕರಿಂದ ಬಂಧಿತನಾಗಿ ಎರಡೇ ದಿನದಲ್ಲಿ ಭಾರತಕ್ಕೆ ಮರಳಿ ಸದ್ಯ ರಜೆಯಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಶೀಘ್ರದಲ್ಲಿಯೇ ಕರ್ತವ್ಯಕ್ಕೆ ವಾಪಸ್​ ಆಗುವುದು ನಿಶ್ಚಿತವಾಗಿದೆ.

ಅಭಿನಂದನ್​ ವರ್ಧಮಾನ್​ ಅವರನ್ನು ಭಾರತೀಯ ವಾಯುಪಡೆ ಶ್ರೀನಗರದಿಂದ ಪಶ್ಚಿಮ ವಲಯದ ಪಾಕಿಸ್ತಾನ ಗಡಿಯಲ್ಲಿರುವ ಮತ್ತೊಂದು ಪ್ರಮುಖ ಏರ್​ಬೇಸ್​ಗೆ ವರ್ಗಾಯಿಸಲಾಗಿದೆ.

ಶ್ರೀನಗರದಲ್ಲಿ ಅಭಿನಂದನ್​ ಅವರ ಭದ್ರತೆಗೆ ಸಂಬಂಧಪಟ್ಟಂತೆ ಆತಂಕ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಈ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಅಭಿನಂದನ್​ ಅವರ ವರ್ಗಾವಣೆ ಖಚಿತಗೊಂಡಿದ್ದು, ಅವರು ಅತಿಶೀಘ್ರದಲ್ಲೇ ತಮ್ಮ ಹೊಸ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಅವರು ಇನ್ನುಮುಂದೆ ಕೆಲಸ ನಿರ್ವಹಿಸಲಿರುವ ಪಶ್ಚಿಮವಲಯದ ಪಾಕ್​ ಗಡಿ ಯುದ್ಧ ಸ್ಥಳವೂ ಹೌದು. ಅಲ್ಲಿ ಯುದ್ಧ ವಿಮಾನ ಹಾರಾಟಕ್ಕೂ ಅವಕಾಶವಿದ್ದು ಅಭಿನಂದನ್​ ಮೊದಲಿನಂತೆಯೇ ಕೆಲಸ ನಿರ್ವಹಿಸಬಹುದು ಎಂದೂ ಹೇಳಲಾಗಿದೆ.

ಪಾಕ್​ನಿಂದ ಮರಳಿದ ಬಳಿಕ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದುದರಿಂದ ಅದನ್ನು ಕೊಡಿಸಲಾಗಿತ್ತು. ಅವರು ಶೀಘ್ರವೇ ಕಾಕ್​ಪಿಟ್​ಗೆ ಮರಳಲಿದ್ದಾರೆಂದು ಕೂಡ ಮಾಧ್ಯಮಗಳು ವರದಿ ಮಾಡಿದ್ದು ಅದರ ಬೆನ್ನಲ್ಲೇ ಈಗ ವರ್ಗಾವಣೆಯ ಸುದ್ದಿ ಹರಿದಾಡುತ್ತಿದೆ.