ಇನ್ಮುಂದೆ ಐಟಂ ಡಾನ್ಸ್ ಮಾಡಲಾರೆ ಎಂದು ಐಂದ್ರಿತಾ ರೇ ಹೇಳಿದ್ದೇಕೆ?

ನಟ ದಿಗಂತ್ ಜತೆ ಸಪ್ತಪದಿ ತುಳಿದ ಬಳಿಕ ನಟಿ ಐಂದ್ರಿತಾ ರೇ ಹೊಸ ಹುರುಪಿನೊಂದಿಗೆ ಮರಳಿದ್ದಾರೆ. ‘ಲವ್ಲೀ ಸ್ಟಾರ್’ ಪ್ರೇಮ್ ಅಭಿನಯಿಸಲಿರುವ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ಗೆ ಐಂದ್ರಿತಾ ನಾಯಕಿ. ಜತೆಗೆ ಈ ವರ್ಷ ಅವರು ಬಾಲಿವುಡ್​ಗೂ ಕಾಲಿಡಲಿರುವುದು ವಿಶೇಷ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜತೆ ನಟಿಸಿ ಬಂದಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಟ್ಟು ದಶಕ ಪೂರೈಸಿರುವ ಅವರಿಗೆ ಗಟ್ಟಿ ಕಥಾಹಂದರದ ಸಿನಿಮಾಗಳಲ್ಲಿ ನಟಿಸುವ ಬಯಕೆ ಉಂಟಾಗಿದೆ. ಇದೆಲ್ಲದರ ಕುರಿತು ‘ಸಿನಿವಾಣಿ’ ಜತೆ ಐಂದ್ರಿತಾ ಆಡಿದ ಮಾತುಗಳು ಇಲ್ಲಿವೆ.

| ಮದನ್ ಬೆಂಗಳೂರು

# ‘ಚೌಕ’ ಯಶಸ್ಸಿನ ಬಳಿಕ ಮತ್ತೊಮ್ಮೆ ಪ್ರೇಮ್​ಗೆ ಜೊತೆಯಾಗುತ್ತಿದ್ದೀರಿ…

ಅವರ ಜತೆ ನಾನು ನಟಿಸುತ್ತಿರುವ ಮೂರನೇ ಸಿನಿಮಾ ಇದು. ‘ಚೌಕ’ಗಿಂತಲೂ ಮುಂಚೆ ದಿನೇಶ್ ಬಾಬು ನಿರ್ದೇಶನದ ಒಂದು ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದೆವು. ಪ್ರೇಮ್ ಜತೆ ನನಗೆ ಯಾವಾಗಲೂ ವಿಶೇಷ ಕಥೆಗಳೇ ಸಿಗುತ್ತವೆ. ಈಗ ಅವರ 25ನೇ ಚಿತ್ರಕ್ಕೆ ನಾಯಕಿ ಆಗುತ್ತಿರುವುದು ಖುಷಿ ಎನಿಸುತ್ತಿದೆ. ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಆದರೆ ಆ ಬಗ್ಗೆ ಈಗಲೇ ಹೆಚ್ಚು ಹೇಳುವಂತಿಲ್ಲ. ಈ ಚಿತ್ರದಲ್ಲಿ ಪ್ರೇಮ್ ಲುಕ್ ತುಂಬ ಡಿಫರೆಂಟ್ ಆಗಿದೆ. ಅದೇ ರೀತಿ ಸಿನಿಮಾ ಕೂಡ ಭಿನ್ನವಾಗಿರಲಿದೆ.

# ಮದುವೆ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳಲು ಸ್ವಲ್ಪ ತಡವಾಯಿತಲ್ಲ?

ಹೊಸ ಸಿನಿಮಾ ಒಪ್ಪಿಕೊಳ್ಳುವುದು ತಡವಾಯಿತು ಎಂಬುದು ನಿಜ. ಆದರೆ ನಾನು ಸಿನಿಮಾ ಕೆಲಸಗಳಿಂದ ದೂರ ಉಳಿದಿರಲಿಲ್ಲ. ‘ಗರುಡ’ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದೆ. ಬಾಲಿವುಡ್​ನ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದೆ. ಆ ಪೈಕಿ ಒಂದರಲ್ಲಿ ಸೀತೆಯ ಪಾತ್ರ ಮಾಡುವ ರಂಗಭೂಮಿ ಕಲಾವಿದೆಯಾಗಿ ಅಭಿನಯಿಸಿದ್ದೇನೆ. ಒಳ್ಳೆಯ ತಂತ್ರಜ್ಞರ ತಂಡ ಆ ಚಿತ್ರಕ್ಕಾಗಿ ಕೆಲಸ ಮಾಡಿದೆ. ಇನ್ನೊಂದು ಚಿತ್ರದಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜತೆ ನಟಿಸಿದ್ದೇನೆ. ಕಾರಣಾಂತರಗಳಿಂದ ಕನ್ನಡದಲ್ಲಿ ಒಂದೆರಡು ಸಿನಿಮಾ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಆ ಚಿತ್ರಗಳೇ ಸೂಪರ್ ಹಿಟ್ ಆದವು. ಅಂಥ ತಪು್ಪಗಳು ಕೂಡ ನನ್ನ ಕಡೆಯಿಂದ ಆಗಿದೆ. ಈ ವರ್ಷ ಎರಡು ಹಿಂದಿ, ಎರಡು ಕನ್ನಡ ಸಿನಿಮಾ ಬಿಡುಗಡೆ ಆಗಲಿದೆ.

# ಚಿತ್ರರಂಗಕ್ಕೆ ಬಂದು ದಶಕ ಕಳೆದಿದ್ದೀರಿ. ಈ ಸಂದರ್ಭದಲ್ಲಿ ಯಾವ ರೀತಿಯ ಕಥೆ ಮತ್ತು ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?

ಆರಂಭದ ದಿನಗಳಲ್ಲಿ ನಾನು ಕಮರ್ಷಿಯಲ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿದೆ. ಆಗ ಅಂಥ ಚಿತ್ರಗಳಿಗೇ ಹೆಚ್ಚು ಡಿಮ್ಯಾಂಡ್ ಇತ್ತು. ‘ಜಂಗ್ಲಿ’, ‘ವೀರಪರಂಪರೆ’ ಮುಂತಾದವು ಕಮರ್ಷಿಯಲ್ ಮಾದರಿಯಲ್ಲೇ ಮೂಡಿಬಂದವು. ಆದರೆ ಇತ್ತೀಚಿನ ದಿನಗಳಲ್ಲಿ ಗಟ್ಟಿ ಕಥಾವಸ್ತುವುಳ್ಳ ಸಿನಿಮಾಗಳು ಬರುತ್ತಿವೆ. ಚಿಕ್ಕ ಬಜೆಟ್ ಸಿನಿಮಾ ಆದರೂ ಪರವಾಗಿಲ್ಲ, ‘ಒಂದು ಮೊಟ್ಟೆಯ ಕಥೆ’ ರೀತಿಯ ಸಿನಿಮಾಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ.

# ‘ಕಮಿಂಗ್ ಬ್ಯಾಕ್’ ಹಿಂದಿ ಸಿನಿಮಾದಲ್ಲಿ ಅರ್ಬಾಜ್ ಖಾನ್ ಜತೆ ನಟಿಸಿದ ಅನುಭವ ಹೇಗಿತ್ತು?

ಅವರು ಸಲ್ಮಾನ್ ಖಾನ್ ಸಹೋದರ ಆದರೂ ತುಂಬ ವಿನಮ್ರ ವ್ಯಕ್ತಿ. ಸೆಟ್​ನಲ್ಲಿ ಎಲ್ಲರನ್ನೂ ನಗಿಸುತ್ತ, ಸ್ನೇಹಜೀವಿಯಂತೆ ಇರುತ್ತಿದ್ದರು. ಅವರ ಹಾಸ್ಯ ಪ್ರಜ್ಞೆ ಸೂಪರ್. ಇಡೀ ಚಿತ್ರವನ್ನು ಸ್ವಿಜರ್​ಲೆಂಡ್​ನಲ್ಲಿ ಚಿತ್ರೀಕರಿಸಿದ್ದೇವೆ. ಮೈನಸ್ 17 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಿದ್ದು ಚಾಲೆಂಜಿಂಗ್ ಆಗಿತ್ತು. ಅದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ. ಕಳೆದ ವರ್ಷವೇ ತೆರೆ ಕಾಣಬೇಕಿತ್ತು. ಕಾರಣಾಂತರಗಳಿಂದ ತಡವಾಯಿತು. ಶೀಘ್ರದಲ್ಲೇ ರಿಲೀಸ್ ಆಗಲಿದೆ.

# ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿರುವುದಕ್ಕೆ ಎಗ್ಸೆ ೖಟ್​ವೆುಂಟ್ ಯಾವ ರೀತಿ ಇದೆ?

ತುಂಬ ಉತ್ಸಾಹದಿಂದ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಸೀತೆ ಪಾತ್ರದ ಸಿನಿಮಾಕ್ಕಾಗಿ ಗುಜರಾತಿನ ಚಿಕ್ಕ ಚಿಕ್ಕ ಊರುಗಳಿಗೆ ತೆರಳಿ ನಟಿಸಿದ ಅನುಭವ ತುಂಬ ಚೆನ್ನಾಗಿತ್ತು. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಒಂದು ತಿಂಗಳು ಕಾರ್ಯಾಗಾರ ಮಾಡಿಸಿದ್ದರು. ಹಿಂದಿಯ ಉಚ್ಚಾರಣೆ ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟರು. ಪರಿಣಾಮ, ಆ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ. ಬಾಲಿವುಡ್ ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಇದೆ.

# ಕಳೆದ ವರ್ಷ ‘ರ್ಯಾಂಬೊ 2’ ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ರಿ. ಇಂಥ ಹಾಡುಗಳ ಬಗ್ಗೆ ನಿಮ್ಮ ಅಭಿಪ್ರಾಯ?

ನಿಜ ಹೇಳಬೇಕೆಂದರೆ, ಈ ರೀತಿಯ ಐಟಂ ಸಾಂಗ್ ಅಥವಾ ಅತಿಥಿ ಪಾತ್ರಗಳಲ್ಲಿ ನಟಿಸಲು ನನಗೆ ಕಿಂಚಿತ್ತೂ ಇಷ್ಟವಿಲ್ಲ. ಆದರೆ ಈವರೆಗೂ ಮೂರು ಐಟಂ ಹಾಡುಗಳಲ್ಲಿ ನಟಿಸಿದ್ದಕ್ಕೆ ಬಲವಾದ ಕಾರಣ ಇದೆ. ಮೊದಲನೆಯದಾಗಿ ‘ಕಡ್ಡಿ ಪುಡಿ’ ಚಿತ್ರದ ‘ಸೌಂದರ್ಯ ಸಮರ..’ ಹಾಡಿನಲ್ಲಿ ನರ್ತಿಸಿದ್ದು ನಿರ್ದೇಶಕ ಸೂರಿ ಅವರಿಗೋಸ್ಕರ. ಯಾಕೆಂದರೆ ‘ಜಂಗ್ಲಿ’ ಸಿನಿಮಾ ಮೂಲಕ ಅವರು ನನಗೆ ಹಿಟ್ ನೀಡಿದ್ದರು. ‘ಪ್ರೇಮ್ ಅಡ್ಡ’ ಚಿತ್ರದ ‘ಬಸಂತಿ..’ ಹಾಡು ಕೂಡ ಹೀಗೆಯೇ ಆಗಿತು. ನನ್ನ ಮೊದಲ ಚಿತ್ರ ‘ಮೆರವಣಿಗೆ’ ನಿರ್ದೇಶನ ಮಾಡಿದ ಮಹೇಶ್ ಬಾಬು ಅವರು ‘ಬಸಂತಿ..’ ಗೀತೆಯಲ್ಲಿ ಡಾನ್ಸ್ ಮಾಡಲು ಕೇಳಿಕೊಂಡಾಗ ಇಲ್ಲ ಎನ್ನಲು ನನಗೆ ಸಾಧ್ಯವಾಗಲಿಲ್ಲ. ಅದೇ ರೀತಿ, ‘ಚೌಕ’ ಮೂಲಕ ನನಗೆ ಗೆಲುವು ತಂದುಕೊಟ್ಟ ನಿರ್ದೇಶಕ ತರುಣ್ ಸುಧೀರ್ ಅವರಿಗೋಸ್ಕರ ‘ರ್ಯಾಂಬೊ 2’ ಚಿತ್ರದ ‘ಧಮ್ ಮಾರೋ ಧಮ್..’ ಹಾಡಿನಲ್ಲಿ ನಟಿಸಿದ್ದೇನೆ. ಈ ನಡುವೆ ಅನೇಕ ಐಟಂ ಸಾಂಗ್ ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದೇನೆ. ಚೆನ್ನಾಗಿ ಡಾನ್ಸ್ ಮಾಡುತ್ತೇನೆ ಎಂಬ ಏಕೈಕ ಕಾರಣಕ್ಕೆ ಸರಣಿ ಐಟಂ ಡಾನ್ಸ್ ಮಾಡಲು ನಾನು ಸಿದ್ಧಳಿಲ್ಲ.

# ಹಾಗಾದರೆ ‘3 ಪೆಗ್’ ಗೀತೆಯಲ್ಲಿ ನರ್ತಿಸಿದ್ದು ಯಾಕೆ?

ಅದನ್ನು ಖುಷಿಯಿಂದಲೇ ಒಪ್ಪಿಕೊಂಡು ಮಾಡಿದೆ. ಯಾಕೆಂದರೆ ಅದು ಒಂದು ಪ್ರತ್ಯೇಕ ಅಲ್ಬಂ ಗೀತೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಕಾರಣದಿಂದ ಒಪ್ಪಿಕೊಂಡೆ. ಆ ಹಾಡಿನ ಸಾಹಿತ್ಯದಲ್ಲಿ ಕೆಲವು ಪದಗಳು ನನಗೆ ಇಷ್ಟ ಆಗಿರಲಿಲ್ಲ. ನಾನು ನಟಿಸಬೇಕೆಂದರೆ ಈ ಪದಗಳನ್ನು ತೆಗೆದು ಹಾಕಬೇಕು ಎಂದು ಹೇಳಿದೆ. ಅದರಂತೆಯೇ ಸಾಹಿತ್ಯ ಬದಲಾಯಿಸಲಾಯಿತು. ಹಾಗಾಗಿ ಆ ಗೀತೆಯಲ್ಲಿ ನಟಿಸಿದೆ.