ಆಂಧ್ರಪ್ರದೇಶದಲ್ಲಿ ಜಗನ್​ ಮೋಹನ್​ ರೆಡ್ಡಿಗೆ ಬೆಂಬಲ ಸೂಚಿಸಿದ ಒವೈಸಿ

ಹೈದರಾಬಾದ್​: ಈ ಲೋಕಸಭೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್​ ಎ ಇತ್ತೇದುಲ್​ ಮುಸ್ಲೀಮಿನ್​ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್​ ಒವೈಸಿ ಅವರು ಆಂಧ್ರ ಪ್ರದೇಶದಲ್ಲಿ ವೈ ಎಸ್​ ಜಗನ್​ ಮೋಹನ್​ ರೆಡ್ಡಿ ಅವರ ವೈಎಸ್​ಆರ್​ಸಿಯನ್ನು ಬೆಂಬಲಿಸಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿರುವ ಒವೈಸಿ ಈ ವಿಚಾರ ಪ್ರಕಟಿಸಿದರು. ಅಲ್ಲದೆ, ರಂಜಾನ್​ ತಿಂಗಳಲ್ಲೇ ಚುನಾವಣೆ ನಡೆಯುತ್ತಿರುವುದರಿಂದ ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಒವೈಸಿ ಕರೆ ನೀಡಿದ್ದಾರೆ.

25 ಲೋಕಸಭೆ ಕ್ಷೇತ್ರಗಳಿರುವ ಆಂಧ್ರ ಪ್ರದೇಶದಲ್ಲಿ ನಾನು ವೈಎಸ್​ ಜಗನ್​ ಮೋಹನ್​ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ. ಆಂಧ್ರದಲ್ಲಿ ಎಲ್ಲರೂ ವೈಎಸ್​ಆರ್​ ಪಕ್ಷಕ್ಕೆ ಬೆಂಬಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಅಲ್ಲದೆ, ತೆಲಂಗಾಣದಲ್ಲಿ ಎಲ್ಲರೂ ಎಐಎಂಐಎಂಗೆ ಬೆಂಬಲಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಗಳಿದ್ದರೂ, ರಂಜಾನ್​ ಅನ್ನು ರಾಜಕೀಯದೊಂದಿಗೆ ತಳುಕು ಹಾಕಬಾರದು ಎಂದು ನಾನು ಎಲ್ಲರನ್ನೂ ಮನವಿ ಮಾಡುತ್ತೇನೆ. ಭಾರತದಲ್ಲಿ ಮೇ 5ರಂದು ರಂಜಾನ್​ ಆರಂಭವಾಗಲಿದೆ. ಜೂನ್​ 3ರ ಒಳಗಾಗಿ ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲೇಬೇಕಿದೆ. ಆದ್ದರಿಂದ ಚುನಾವಣೆ ಪ್ರಕ್ರಿಯೆ ಆ ಅವಧಿಯೊಳಗೆ ಚಾಲ್ತಿಯಲ್ಲಿ ಇರಲೇ ಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮೇ 5ರ ಒಳಗೆ ಮುಕ್ತಾಯ ಮಾಡುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿ ಬಾರಿಯ ಚುನಾವಣೆಯಲ್ಲೂ ಮುಸ್ಲೀಂ ಸಮುದಾಯದ ಮತದಾನ ಪ್ರಮಾಣ ಕುಸಿಯುತ್ತದೆ ಎಂದು ಚುನಾವಣೆ ಆಯೋಗ ಹೇಳುತ್ತಲೇ ಇರುತ್ತದೆ. ಆದ್ದರಿಂದ ಈ ಬಾರಿ ಮುಸ್ಲೀಮರು ಬೆಳಗ್ಗೆಯೇ ಬಂದು ತಮ್ಮ ಮತವನ್ನು ಸೂಕ್ತವಾದವರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.