ಪಿಂಚಣಿ ಹಣ ಅರ್ಹರಿಗೆ ಸಕಾಲಕ್ಕೆ ತಲುಪಲಿ

ಐಮಂಗಲ: ವೃದ್ಧರು, ಅಶಕ್ತರಿಗೆ ಸಕಾಲಕ್ಕೆ ಪಿಂಚಣಿ ಹಣ ತಲುಪಿಸಿ ಅವರ ಜೀವನ ನಿರ್ವಹಣೆಗೆ ನೆರವಾಗಬೇಕು ಎಂದು ಉಪವಿಭಾಗಾಧಿಕಾರಿ ವಿಜಯ್‌ಕುಮಾರ್ ಬ್ಯಾಂಕ್ ಮತ್ತು ಅಂಚೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದ ಶ್ರೀ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಬಳಿ ಮಂಗಳವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾವೇತನ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದೆ. ಈ ಹಣ ಅಂಚೆ ಇಲಾಖೆ ಹಾಗೂ ಬ್ಯಾಂಕ್‌ಗಳ ಮೂಲಕ ಸಂದಾಯ ಮಾಡಲಾಗುತ್ತಿದೆ. ಅರ್ಹರಿಗೆ ಸಕಾಲಕ್ಕೆ ಹಣ ಪಾವತಿ ಆಗುತ್ತಿದೆಯೋ, ಇಲ್ಲವಾದರೆ ಯಾಕೆ ಆಗುತ್ತಿಲ್ಲ, ಮಂಜೂರಾತಿ ರದ್ದಾಗಿದೆಯೇ ಎಂಬುದನ್ನು ಅವಲೋಕಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಲ್ಲಿ ಪಿಂಚಣಿ ಹಣ ಸಂದಾಯ ಆಗದವರು ದೂರು ನೀಡಬಹುದು ಹಾಗೂ ಹೊಸಬರು ಸೌಲಭ್ಯ ಕೋರಿ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಯನ್ನು ವಾರದೊಳಗೆ ಪರಿಶೀಲಿಸಿ ಅರ್ಹರಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಗುವುದು. ಸಂಬಂಧಪಟ್ಟ ನಾಡ ಕಚೇರಿ ಉಪ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಜಿಪಂ ಸದಸ್ಯೆ ಟಿ.ಆರ್. ರಾಜೇಶ್ವರಿ ಮಾತನಾಡಿ, ಐಮಂಗಲ ನಾಡ ಕಚೇರಿಗೆ ಹೋಬಳಿಯ ನೂರಾರು ಜನ ಪ್ರತಿನಿತ್ಯ ಪಹಣಿ, ಜಾತಿ-ಆದಾಯ ಪ್ರಮಾಣ ಪತ್ರ ಇನ್ನಿತರ ಕೆಲಸಗಳಿಗೆ ಬರುತ್ತಾರೆ. ಕಚೇರಿಯಲ್ಲಿ ಅಳವಡಿಸಿರುವ ಯುಪಿಎಸ್ ಹಾಗೂ ಸೋಲಾರ್ ಸಂಪರ್ಕ ದುರಸ್ತಿಗೊಂಡಿವೆ. ಕರೆಂಟ್ ಹೋದ ಸಂದರ್ಭದಲ್ಲಿ ಜನರು ದಿನಗಟ್ಟಲೆ ಕಾಯಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ 40 ಹೊಸ ಅರ್ಜಿಗಳು ಸಲ್ಲಿಕೆಯಾದವು. ಉಪ ತಹಸೀಲ್ದಾರ್ ಆರ್. ಮಂಜಪ್ಪ, ಕಂದಾಯ ನಿರೀಕ್ಷಕ ಎಂ.ಎಂ. ಸದಾಶಿವಪ್ಪ, ಪಿಡಿಒ ಎಂ. ಶಶಿಕಲಾ, ಗ್ರಾಪಂ ಸದಸ್ಯರಾದ ಸೌಮ್ಯ, ಮಲ್ಲಮ್ಮ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *